ಕಾಸರಗೋಡು: ಜಿಲ್ಲಾ ಪಂಚಾಯಿತಿ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಯೋಜನೆಯನ್ನು ಎರಡು ವರ್ಷಗಳ ಯೋಜನೆಯಾಗಿ ಜಾರಿಗೊಳಿಸಲು ಕಾಸರಗೋಡು ಜಿಲ್ಲಾ ಪಂಚಾಯತ್ ಸಭೆಯು ನಿರ್ಧರಿಸಿದೆ. ಮೊದಲ ವರ್ಷ 14 ಲಕ್ಷ ಹಾಗೂ ಎರಡನೇ ವರ್ಷ 20 ಲಕ್ಷ ರೂ. ಮೊತ್ತವನ್ನು ಇದಕ್ಕಾಗಿ ಜಿಲ್ಲಾ ಪಂಚಾಯಿತಿ ವಿನಿಯೋಗಿಸಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಂಜೂರಾದ 5 ಲಕ್ಷ ರೂಪಾಯಿಗಳ ಜೊತೆಗೆ ಹೆಚ್ಚುವರಿಯಾಗಿ 9 ಲಕ್ಷ ರೂಪಾಯಿ ಗಳನ್ನು ನೀಡಲಾಗುವುದು. ಮುಂದಿನ ಆರ್ಥಿಕ ವರ್ಷದ ಅಂತ್ಯದೊಳಗೆ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಜಿಲ್ಲೆಯಾಗಿ ಘೋಷಿಸುವುದು ಯೋಜನೆಯ ಗುರಿಯಾಗಿದೆ.
ಲ್ಯಾಬ್ ಸೌಲಭ್ಯ ಹೊಂದಿರದ ಜಿಪಂ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಲ್ಯಾಬ್ ವ್ಯವಸ್ಥೆ ಕಲ್ಪಿಸಲಾಗುವುದು. ಆವರಣ ಗೋಡೆ ಇಲ್ಲದ ಎಲ್ಲಾ ಶಾಲೆಗಳಿಗೂ ಒಂದೇ ಮಾದರಿಯ ಆವರಣ ಗೋಡೆ ಹಾಗೂ ಗೇಟ್ ನಿರ್ಮಿಸಲಾಗುವುದು. ವಯೋವೃದ್ಧರಿಗೆ ಆಹಾರ ವಿತರಣಾ ಯೋಜನೆ ಮುಂದುವರಿಸಲೂ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಯೋಜನೆಯು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಮಾದಕ ವಸ್ತುಗಳ ವಿತರಣೆಯ ವಿರುದ್ಧವಾಗಿ ಶಾಲೆಗಳನ್ನು ಕೇಂದ್ರೀಕರಿಸಿ ಕುಟುಂಬಶ್ರೀಯ ಸಹಯೋಗದಲ್ಲಿ ಯೋಜನೆ ಆರಂಭಿಸಲಾಗುವುದು. ಮಕ್ಕಳು ಶಾಲೆಯಿಂದ ಹೊರಗೆ ಹೋಗುವುದನ್ನು ಮತ್ತು ಅಂಗಡಿಗಳಿಂದ ಅಮಲು ಪದಾರ್ಥಗಳನ್ನು ಸೇವಿಸುವುದನ್ನು ತಡೆಯಲು ಕುಟುಂಬಶ್ರೀ ಸಹಯೋಗದಲ್ಲಿ ಶಾಲೆಗಳಲ್ಲಿ ಸ್ಟೇಷನರಿ ಅಂಗಡಿಗಳನ್ನುಪ್ರಾರಂಭಿಸಲಾಗುವುದು. ಯೋಜನೆಗೆ ಅಗತ್ಯವಿರುವ ಅನುದಾನವನ್ನು ಜಿಲ್ಲಾ ಪಂಚಾಯಿತಿ ನೀಡಲಿದೆ. ಪೈಲಟ್ ಯೋಜನೆಯಾಗಿ ಪಿಲಿಕ್ಕೋಡ್ ಮತ್ತು ಚಾಯೋತ್ ಶಾಲೆಗಳಲ್ಲಿ ಸ್ಟೇಷನರಿ ಅಂಗಡಿಗಳನ್ನು ತೆರೆಯಲಾಗುವುದು. ಕುಟುಂಬಶ್ರೀ ಸಹಯೋಗದಲ್ಲಿ ಯೋಜನೆ ಆರಂಭಿಸಲು ಆಸಕ್ತಿ ಹೊಂದಿರುವ ಇತರ ಶಾಲೆಗಳಿಗೂ ಜಿಲ್ಲಾ ಪಂಚಾಯತ್ ಅಗತ್ಯ ನೆರವು ನೀಡಲಿದೆ.
ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಾನವಾಸ್ ಪಾದೂರ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ, ಎಸ್ ಎನ್ ಸರಿತಾ, ಕೆ. ಶಕುಂತಲಾ, ಸದಸ್ಯರಾದ ಕೆ. ಕಮಲಾಕ್ಷಿ, ನಾರಾಯಣ ನಾಯ್ಕ್, ಎಂ. ಶೈಲಜಾ ಭಟ್, ಜೋಮೋನ್ ಜೋಸ್, ಎಂ. ಮನು, ಬಿ. ಎಚ್. ಫಾತಿಮತ್ ಶಮ್ನಾ, ಜಾಸ್ಮಿನ್ ಕಬೀರ್, ಜಮೀಲಾ ಸಿದ್ದೀಕ್ ದಂಡಗೋಳಿ, ಗೋಲ್ಡನ್ ಅಬ್ದುಲ್ ರಹಮಾನ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಕೆ. ಪ್ರದೀಪನ್ ಉಪಸ್ಥಿತರಿದ್ದರು.
ಎರಡು ವರ್ಷಗಳಲ್ಲಿ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಯೋಜನೆ ಅನುಷ್ಠಾನ-ಜಿ.ಪಂ ತೀರ್ಮಾನ
0
ಜನವರಿ 20, 2023
Tags