ಅಗರ್ತಲಾ: 'ತ್ರಿಪುರಾದಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್‌ನೊಂದಿಗೆ ಚುನಾವಣಾ ಮೈತ್ರಿ ಸಾಧ್ಯವಿಲ್ಲ' ಎಂದು ಟಿಎಂಸಿ ಭಾನುವಾರ ಹೇಳಿದೆ.
'ಸಿಪಿಎಂ ಅಧಿಕಾರದಲ್ಲಿದ್ದಾಗ ತೊಂದರೆ ಅನುಭವಿಸಿದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರೇ ಆ ಮೈತ್ರಿಯ ಪರವಾಗಿ ಮತ ಹಾಕುವುದಿಲ್ಲ.
ಆದ್ದರಿಂದ ಸಿಪಿಎಂ-ಕಾಂಗ್ರೆಸ್ ಮೈತ್ರಿಗೆ ನಮ್ಮ ಬೆಂಬಲವಿಲ್ಲ' ಎಂದು ಟಿಎಂಸಿ ರಾಜ್ಯ ಘಟಕದ ಅಧ್ಯಕ್ಷ ಪಿಜೂಷ್ ಕಾಂತಿ ಬಿಸ್ವಾ ಹೇಳಿದರು.
'ಎಲ್ಲೆಲ್ಲಿ ನಮ್ಮ ಪಕ್ಷ ಗೆಲ್ಲುವ ವಿಶ್ವಾಸ ಇದೆಯೊ, ಅಲ್ಲಲ್ಲಿ ನಾವು ಸ್ಪರ್ಧಿಸಲಿದ್ದೇವೆ. ಜೊತೆಗೆ ಚುನಾವಣೆಯಲ್ಲಿ ಮೈತ್ರಿ ಬಯಸಿದ ಬೇರೆಲ್ಲಾ ಪಕ್ಷಗಳಿಗೂ ಟಿಎಂಸಿ ಬಾಗಿಲು ತೆರೆಯಲಿದೆ' ಎಂದರು.
ಮಮತಾ ಭೇಟಿ: 'ಟಿಎಂಸಿ ಅಧ್ಯಕ್ಷೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಫೆ.6ರಂದು ಎರಡು ದಿನಗಳ ಭೇಟಿಗಾಗಿ ತ್ರಿಪುರಾಕ್ಕೆ ಬರಲಿದ್ದು, ಫೆ.7ರಂದು ರೋಡ್ ಷೋ ನಡೆಸಲಿದ್ದಾರೆ. ಜೊತೆಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಫೆ.2ಕ್ಕೆ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರಲಿದ್ದಾರೆ'ಎಂದು ಮಾಹಿತಿ ನೀಡಿದರು.
ಫೆ. 16ರಂದು ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.