ನಮ್ಮ ಭಾರತೀಯ ಸಂಪ್ರದಾಯದಲ್ಲಿ ದೃಷ್ಟಿ ಬೊಟ್ಟು ಅಂತ ಇಡುತ್ತಾರೆ, ಯಾರ ದೃಷ್ಟಿಯೂ ತಾಗದಿರಲಿ ಎಂದು ದೃಷ್ಟಿ ಬೊಟ್ಟು ಇಡುತ್ತಾರೆ. ಭಾರತೀಯ ಬಹುತೇಕ ಮಕ್ಕಳ ಮುಖ ನೋಡಿದರೆ ಆ ಮಗುವಿನ ಮುಖ ಹೇಗಿದೆ ಅಂತ ಗೊತ್ತಾಗಲ್ಲ, ಏಕೆಂದರೆ ಮುಖ ನೋಡಿದ ತಕ್ಷಣ ಹಣೆ, ಎರಡು ಕೆನ್ನೆ, ಗಲ್ಲದಲ್ಲಿ ದೊಡ್ಡ ಕಪ್ಪು ಬೊಟ್ಟುಗಳೇ ಕಾಣಿಸುತ್ತದೆ.
ನೀವು ಈ ರೀತಿ ಬೊಟ್ಟು ಇಡದೆ ಮಗುವನ್ನು ಹೊರಗಡೆ ಕರೆದುಕೊಂಡು ಹೋದರೆ ಏನಮ್ಮ ಮಗುವಿಗೆ ಒಂದು ಬೊಟ್ಟು ಇಡೋಕೆ ಆಗೋಲ್ವಾ ಎಂದು ಕೇಳುತ್ತಾರೆ, ಅವರ ಪ್ರಕಾರ ದೃಷ್ಟಿ ಬೊಟ್ಟು ಇಟ್ಟರೆ ಮಗುವಿಗೆ ಯಾರ ದೃಷ್ಟಿ ಬೀಳಲ್ಲ, ಮಗು ಕಾಯಿಲೆ ಬೀಳುವುದನ್ನು ತಡೆಗಟ್ಟಬಹುದು ಎಂಬುವುದಾಗಿದೆ.
ದೃಷ್ಟಿಬೊಟ್ಟನ್ನು ಮೂಢನಂಬಿಕೆ ಎಂದು ಹೇಳುವವರೂ ಇದ್ದಾರೆ
ಕೆಲವರಿಗೆ ಮಗುವಿನ ಹಣೆಗೆ ಕಪ್ಪು ಬೊಟ್ಟುಗಳನ್ನು ಇಡುವುದು ನಂಬಿಕೆಯಾದರೆ, ಇನ್ನು ಕೆಲವರಿಗೆ ಅದು ಮೂಢ ನಂಬಿಕೆ. ವಿದೇಶಿಯರೇನು ತಮ್ಮ ಮಕ್ಕಳಿಗೆ ಆ ದೃಷ್ಟಿ ಮುಖವೆಲ್ಲಾ ಬಿಟ್ಟು ಇಡುತ್ತಾರೆಯೇ ಎಂದು ಕೇಳುವವರೂ ಇದ್ದಾರೆ.
ಆದರೆ ಯಾವುದೇ ಧರ್ಮದವರಾಗಲಿ ಅವರದ್ದೇ ಆದ ನಂಬಿಕೆಗಳಿರುತ್ತದೆ. ನೀವು ವಿದೇಶದಲ್ಲಿ ಮೂಢ ನಂಬಿಕೆ ಇಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ. ಭಾರತದಲ್ಲಿ ಮಾತ್ರ ಮೂಢ ನಂಬಿಕೆಗಳಿದೆ ಎಂದು ಭಾವಿಸುವುದೇ ದೊಡ್ಡ ಮೂರ್ಖತನ. ಭಾರತದಲ್ಲಿ ಕೆಲವೊಂದು ಪದ್ದತಿಗಳನ್ನು ನೋಡುವಾಗ ಮೂಢ ನಂಬಿಕೆ ಎಂದು ಅನಿಸುವುದು. ಆದರೆ ನಮ್ಮಲ್ಲಿರುವ ಹಲವಾರು ಆಚರಣೆಗಳ ಹಿಂದೆ ಕೆಲವೊಂದು ವೈಜ್ಞಾನಿಕ ಕಾರಣಗಳಿರುತ್ತದೆ, ಆದರೆ ಅದು ನಮಗೆ ಗೊತ್ತಿರುವುದಿಲ್ಲ.
ಮಕ್ಕಳಿಗೆ ಹಚ್ಚುವ ಕಪ್ಪು ಬೊಟ್ಟಿನಿಂದ ಆರೋಗ್ಯಕ್ಕೆ ಒಳ್ಳೆಯದು: ಡಾ. ಖಾದರ್
ಕರ್ನಾಟಕದ ಪ್ರಸಿದ್ಧ ವೈದ್ಯ ಡಾ. ಖಾದರ್ ಅವರು ಒಂದು ಸಮಾರಂಭದಲ್ಲಿ ಮಕ್ಕಳಿಗೆ ಹಚ್ಚುವ ಕಪ್ಪು ಬಣ್ಣದ ಬೊಟ್ಟಿನ ಪ್ರಾಮುಖ್ಯತೆ ಬಗ್ಗೆ ಹೇಳುವಾಗ ಅಬ್ಬಾ ಎಷ್ಟೊಂದು ಪ್ರಯೋಜನವಿದೆ ಎಂದನಿಸದೆ ಇರಲ್ಲ. ಹೌದು ಕಪ್ಪು ಬೊಟ್ಟನ್ನು ಹಣೆಗೆಮ ಕಾಲಿನ ಕೆಳಗಡೆ, ಅಂಗೈಗೆ ಹಚ್ಚುತ್ತಾರೆ ಹೀಗೆ ಹಚ್ಚುವುದರಿಂದ ದೇಹದ ಉಷ್ಣಾಂಶ ಕಾಪಾಡಲು ಸಹಕಾರಿ, ಆದ್ದರಿಂದ ವಾತಾವರಣ ಬದಲಾದಾಗ ಮಕ್ಕಳು ಕಾಯಿಲೆ ಬೀಳಲ್ಲ. ಆದರೆ ಈ ಕಾರಣ ತಿಳಿಯದೆ ನಾವು ಅದನ್ನು ಮೂಢ ನಂಬಿಕೆ ಎಂದು ಹೇಳುತ್ತೇವೆ ಅಲ್ವಾ?
ಕಾಡಿಗೆ ಮನೆಯಲ್ಲಿಯೇ ಮಾಡಿದರೆ ಹೆಚ್ಚು ಆರೋಗ್ಯಕರ
ನಾವು ಅಂಗಡಿಯಿಂದ ತಂದು ಹಚ್ಚುವ ಕಾಡಿಗೆ ಆರೋಗ್ಯಕರವರಲ್ಲ. ಹಿಂದೆಯೆಲ್ಲಾ ಹರಳೆಣ್ಣೆ ದೀಪ ಹಚ್ಚಿ ಅದರಿಂದ ಮಸಿ ತಯಾರಿಸಿ ಬಳಸುತ್ತಿದ್ದರು.
ಮನೆಯಲ್ಲಿಯೇ ಕಾಡಿಗೆ ಮಾಡುವುದಾದರೆ
ಕಾಜಲ್ ಮಾಡಲು ಬೇಕಾಗುವ ಸಾಮಗ್ರಿ
ಹತ್ತಿಯ ಬತ್ತಿ
4-5 ಬಾದಾಮಿ
1 ಚಮಚ ಅಜ್ವೈನ್
ತುಪ್ಪ/ಹರಳೆಣ್ಣೆ
ಮಾಡುವುದು ಹೇಗೆ?
* ಅಜ್ವೈನ್ ಹಾಗೂ ಬಾದಾಮಿಯನ್ನು ಕುಟ್ಟಿ ಪುಡಿ ಮಾಡಿ.
* ನಂತರ ಶುದ್ಧವಾದ ಹತ್ತಿಯ ಬಟ್ಟೆಯನ್ನು ಹರಡಿ, ಅದರ ಮೇಲೆ ಬಾದಾಮಿ ಹಾಗೂ ಅಜ್ವೈನ್ ಪುಡಿ ಉದುರಿಸಿ ಅದನ್ನು ಸುತ್ತಿ (ರೋಲ್ ಮಾಡಿ) ಅದರಿಂದ ದಪ್ಪವಾದ ಬತ್ತಿ ತಯಾರಿಸಿ.
* ಈಗ ದೊಡ್ಡ ಮಣ್ಣಿನ ಹಣತೆಗೆ ಹಸುವಿನ ತುಪ್ಪ ಹಾಕಿ.
* ಈಗ ಅದರ ಎರಡೂ ಬದಿ ಉದ್ದದ ಲೋಟ ಇಡಿ ಅದರ ಮೇಲೆ ತಟ್ಟೆ ಮಗುಚಿ ಹಾಕಿ.
* ದೀಪ ಉರಿದು ಮಸಿ ತಟ್ಟೆಯಲ್ಲಿ ಸಂಗ್ರಹವಾಗುತ್ತದೆ.