ನವದೆಹಲಿ: ಬೆಂಗಳೂರು, ಧಾರವಾಡ, ಗುವಾಹಟಿ, ಜೋಧಪುರದ ಚೌಪಾಸನಿ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ದೊರೆತಿರುವ ಮಧ್ಯಯುಗಕ್ಕೆ ಸೇರಿದ 150 ಹಸ್ತಪ್ರತಿ ಹಾಗೂ ಇತರೆ ಕಡತಗಳು ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶದಿಂದ ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ (ಐಸಿಎಚ್‌ಆರ್) ಇವುಗಳಿಗೆ ಡಿಜಿಟಲ್ ಸ್ಪರ್ಶ ನೀಡಲು ಮುಂದಾಗಿದೆ.
ಇವು ಸದ್ಯದಲ್ಲೇ ಐಸಿಎಚ್‌ಆರ್ ಪೋರ್ಟಲ್‌ನಲ್ಲಿ ಲಭ್ಯವಾಗಲಿವೆ.
ಮರಾಠರ ಆಳ್ವಿಕೆಗೆ ಸಂಬಂಧಿಸಿದಂತೆ ದೊರೆತಿರುವ ಹಸ್ತಪ್ರತಿಗಳನ್ನೂ ಡಿಜಿಟಲೀಕರಣಗೊಳಿಸಲು ನಿರ್ಧರಿಸಿರುವ ಐಸಿಎಚ್‌ಆರ್, ಈ ಸಂಬಂಧ ಛತ್ರಪತಿ ಸಾಹು ಮಹಾರಾಜ್ ಮರಾಠ ಇತಿಹಾಸ ಅಧ್ಯಯನ ಕೇಂದ್ರದ ಜೊತೆಗೆ ಜನವರಿ 2ರಂದು ಒಡಂಬಡಿಕೆಗೆ ಸಹಿ ಹಾಕಲಿದೆ.
ಕನ್ನಡ ಹಾಗೂ ಕರ್ನಾಟಕದ ವಿವಿಧ ಭಾಷೆಗಳಿಗೆ ಸಂಬಂಧಿಸಿದ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಐಸಿಎಚ್‌ಆರ್ ಈಗಾಗಲೇ ಬೆಂಗಳೂರಿನ ಮಿಥಿಕ್ ಸೊಸೈಟಿ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.
ಅಸ್ಸಾಂನ ಅಹೋಮ್ ಬುರಂಜಿಯ ಹಸ್ತಪ್ರತಿಗಳು, ಸಿಕ್ಕಿಂನ ನಾಮಗ್ಯಾಲ್ ವಿಶ್ವವಿದ್ಯಾಲಯದಲ್ಲಿರುವ ಟಿಬೆಟಿಯನ್ ಹಸ್ತಪ್ರತಿಗಳು, ಕಾಶ್ಮೀರದಲ್ಲಿ ಲಭಿಸಿರುವ ಸಂಸ್ಕೃತದ ಹಸ್ತಪ್ರತಿಗಳಿಗೂ ಡಿಜಿಟಲ್ ಸ್ಪರ್ಶ ನೀಡಲು ತೀರ್ಮಾನಿಸಲಾಗಿದೆ. ಐಸಿಎಚ್‌ಆರ್ ಜನವರಿ 16ರಂದು ಉದಯಪುರದಲ್ಲಿ ಮತ್ತೊಂದು ಒಡಂಬಡಿಕೆಗೆ ಸಹಿ ಹಾಕಲಿದೆ.
'ಪ್ರಾಚೀನ, ಮಧ್ಯ ಹಾಗೂ ಆಧುನಿಕ ಯುಗಕ್ಕೆ ಸಂಬಂಧಿಸಿದ ದೇಶದ ಎಲ್ಲಾ ಭಾಷೆಗಳಲ್ಲಿನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವುದು ಈ ಯೋಜನೆಯ ಭಾಗವಾಗಿದೆ' ಎಂದು ಐಸಿಎಚ್‌ಆರ್ ಸದಸ್ಯ ಕಾರ್ಯದರ್ಶಿ ಉಮೇಶ್ ಅಶೋಕ್ ಕದಂ ಹೇಳಿದ್ದಾರೆ.
'ದೇಶದ ಯಾವ ಗ್ರಂಥಾಲಯಗಳಲ್ಲೂ ಈ ಹಸ್ತಪ‍್ರತಿಗಳನ್ನು ಸಂಗ್ರಹಿಸಿಡಲಾಗಿಲ್ಲ. ಇವು ಖಾಸಗಿಯವರ ಬಳಿ ಇರುವುದರಿಂದ ಸಾರ್ವಜನಿಕರಿಗೆ ದೊರೆಯುತ್ತಿಲ್ಲ. ಇವುಗಳ ಡಿಜಿಟಲೀಕರಣ ಪೂರ್ಣಗೊಂಡ ಬಳಿಕ ಐಸಿಎಚ್‌ಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ವಾರ್ಷಿಕ ಶುಲ್ಕ ಪಾವತಿಸಿದವರಿಗೆ ಇವು ಲಭ್ಯವಾಗಲಿವೆ' ಎಂದಿದ್ದಾರೆ.