ಮುಂಬೈ: ಸಾಲ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ವಿಡಿಯೋಕಾನ್ ಗ್ರೂಪ್ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದ ನಂತರ ಅರ್ಥೂರ್ ರಸ್ತೆ ಜೈಲಿನಿಂದ ಹೊರಗೆ ಬಂದಿದ್ದಾರೆ.
ಈ ಪ್ರಕರಣದಲ್ಲಿ ಧೂತ್ ಅವರನ್ನು ಡಿಸೆಂಬರ್ 26, 2022ರಂದು ಬಂಧಿಸಲಾಗಿತ್ತು. ಇದರಲ್ಲಿ ಮಾಜಿ ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಕೂಡಾ ಆರೋಪಿಗಳಾಗಿದ್ದಾರೆ.
ಕೋರ್ಟ್ ನಿಂದ ಮಧ್ಯಂತರ ಜಾಮೀನು ಮಂಜೂರು ಆಗುತ್ತಿದ್ದಂತೆಯೇ, ಬಿಡುಗಡೆಯ ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳಿಗೆ ವೇಣುಗೋಪಾಲ್ ಧೂತ್ ಪರ ವಕೀಲರು ಸಲ್ಲಿಸಿದರು. ನಂತರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನಾ, ಅವರ ಬಂಧನಕ್ಕೆ ಸಿಬಿಐ ಉಲ್ಲೇಖಿಸಿರುವ ಕಾರಣ ಸಾಂದರ್ಭಿಕವಾಗಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದ ಬಾಂಬೆ ಹೈಕೋರ್ಟ್, ಮಧ್ಯಂತರ ಜಾಮೀನು ನೀಡಿ ಆದೇಶಿಸಿತ್ತು.