ಮುಂಬೈ: ಯೋಜನೆಯೊಂದರಲ್ಲಿ ತನಗೆ ಮಂಜೂರಾದ ಭೂಮಿಯ ದಾಖಲೆ ಪತ್ರಗಳು ತನ್ನ ಹೆಸರಿಗೆ ಆಗುವುದರಲ್ಲಿ ವಿಳಂಬ ಆಗುತ್ತಿರುವುದಕ್ಕೆ ರೈತರೊಬ್ಬರು ಅರೆ ಸಮಾಧಿಯಾಗಿ ಪ್ರತಿಭಟನೆ ನಡೆಸಿದ ವಿಕ್ಷಿಪ್ತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಜಲ್ನಾ ಜಿಲ್ಲೆಯ ಸುನಿಲ್ ಜಾಧವ್ ಎನ್ನುವವರೇ ಹೀಗೆ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ ರೈತ.
ಸುನಿಲ್ ಅವರಿಗೆ, ಕರ್ಮವೀರ್ ದಾದಾಸಾಹೇಬ್ ಗಾಯಕ್ವಾಡ್ ಸಬಲೀಕರಣ್ ಸ್ವಾಭಿಮಾನ್ ಯೋಜನೆಯಡಿ 2 ಎಕರೆ ಭೂಮಿ 2019ರಲ್ಲಿ ಮಂಜೂರಾಗಿತ್ತು. ಆದರೆ ಅದರ ದಾಖಲೆ ಪತ್ರಗಳು ಇನ್ನೂ ಅವರ ಕೈಗೆ ಸಿಕ್ಕಿಲ್ಲ. ಹೀಗಾಗಿ ಅರೆ ಸಮಾಧಿಯಾಗಿ ಪ್ರತಿಭಟನೆ ಮಾಡಿದ್ದಾರೆ.
ಅಲ್ಲದೇ ತನ್ನ ಕೆಲಸ ಆಗುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ರೈತ ಪಟ್ಟು ಹಿಡಿದಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಲಿ ಜಾಗವೊಂದರಲ್ಲಿ ವ್ಯಕ್ತಿ ಕತ್ತಿನವರೆಗೆ ತನ್ನನ್ನು ತಾನು ಸಮಾಧಿ ಮಾಡಿಕೊಂಡಿದ್ದು, ಅವರ ಪಕ್ಕದಲ್ಲೇ ಒಂದು ಮಗು ಹಾಗೂ ಮಹಿಳೆ ಇರುವುದು ವಿಡಿಯೋದಲ್ಲಿ ದಾಖಲಾಗಿದೆ.