ನವದೆಹಲಿ :ಸಂರಕ್ಷಿತ ಅರಣ್ಯ ಪ್ರದೇಶದ ಸುತ್ತಲಿನ ಬಫರ್ ವಲಯ ಅಥವಾ ಪರಿಸರ ಸೂಕ್ಷ್ಮ ವಲಯದಲ್ಲಿ ವಾಸವಿರುವವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಅಲ್ಲದೇ, ಈ ಪ್ರದೇಶಗಳಲ್ಲಿ ಪರಂಪರಾಗತವಾಗಿ ನಡೆಸಿಕೊಂಡು ಬಂದಿರುವ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೂ ಅಡ್ಡಿ ಉಂಟು ಮಾಡುವುದಿಲ್ಲ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ಕೇರಳದ ಸಂಸದ ಮುರಳೀಧರನ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಪಶ್ಚಿಮ ಘಟ್ಟದ ಪರಿಸರಸೂಕ್ಷ್ಮ ವಲಯಗಳಿಂದ ಸ್ಥಳೀಯರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬುದಾಗಿ ಕರ್ನಾಟಕ ಸೇರಿ ಪಶ್ಚಿಮಘಟ್ಟ ಹಾದು ಹೋಗುವ ರಾಜ್ಯಗಳ ಸಂಸದರು ಸಂಸತ್ತಿನಲ್ಲಿ ಆತಂಕ ವ್ಯಕ್ತಪಡಿಸಿದ್ದರು.
ರಾಜ್ಯ ಸರ್ಕಾರಗಳು ಸಲ್ಲಿಸಿದ ಪ್ರಸ್ತಾವನೆಯನ್ನು ಆಧರಿಸಿ ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮವಲಯದ ಅಧಿಸೂಚನೆ ಹೊರಡಿಸಲಾಗುತ್ತದೆ. ಆದರೆ, ಈ ಅಧಿಸೂಚನೆ ಹೊರಡಿಸಿದ ನಂತರ ಸ್ಥಳೀಯರನ್ನು ಒಕ್ಕಲೆಬ್ಬಿಸುವುದಿಲ್ಲ, ಸ್ಥಳಾಂತರ ಮಾಡುವುದಿಲ್ಲ ಹಾಗೂ ಸ್ಥಳೀಯರ ವೃತ್ತಿಗಳ ಮೇಲೂ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶದ ಗಣಿಗಾರಿಕೆ, ಕ್ವಾರಿ ಮತ್ತು ಕ್ರಷಿಂಗ್‌ಗಳಿಗೆ ಮಾತ್ರ ಅವಕಾಶ ನೀಡುವುದಿಲ್ಲ. ಆದರೆ, ಕೃಷಿ, ತೋಟಗಾರಿಕೆ ಚಟುವಟಿಕೆಗಳು, ಹೈನುಗಾರಿಕೆ, ಮೀನು ಸಾಕಾಣಿಕೆ ಮತ್ತು ಮೀನುಗಾರಿಕೆಯ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ. ನಾಗರಿಕ ಸೌಲಭ್ಯಗಳನ್ನು ಒಳಗೊಂಡ ಮೂಲಸೌಕರ್ಯಗಳನ್ನು ಕೆಲವು ನಿರ್ಬಂಧಗಳಿಗೆ ಒಳಪಟ್ಟು ಕಲ್ಪಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
ಎಲ್ಲ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿಧಾಮಗಳು ಮತ್ತು ರಕ್ಷಿತ ಅರಣ್ಯಗಳು ಅವುಗಳ ಗಡಿಯಿಂದ ಕನಿಷ್ಠ 1 ಕಿ.ಮೀ ವ್ಯಾಪ್ತಿಯಲ್ಲಿ ಬಫರ್ ವಲಯ ಅಥವಾ ಪರಿಸರ ಸೂಕ್ಷ್ಮ ವಲಯವನ್ನು ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಕೇಂದ್ರ ಸರ್ಕಾರ ಪ್ರಶ್ನಿಸಿತ್ತು.
ಡಾ. ಕಸ್ತೂರಿರಂಗನ್ ಅಧ್ಯಕ್ಷತೆಯ ಸಮಿತಿ ತನ್ನ ವರದಿಯಲ್ಲಿ ಶೇ 37 ರಷ್ಟು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಲು ಶಿಫಾರಸು ಮಾಡಿತ್ತು. ಗಣಿಗಾರಿಕೆ ಮತ್ತು ಕ್ವಾರಿ ನಡೆಸುವುದರ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ಹೇಳಿತ್ತು. ಈ ವರದಿ ಜಾರಿ ಮಾಡುವುದರಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ 1,576 ಗ್ರಾಮಗಳ 20,668 ಚದರ ಕಿ.ಮೀ ಪ್ರದೇಶದ ಮೇಲೆ ಪರಿಣಾಮ ಆಗುತ್ತದೆ ಎಂದು ಕರ್ನಾಟಕ ಸರ್ಕಾರ ಅಂದಾಜು ಮಾಡಿತ್ತು.