ಮುಂಬೈ: ಮಾಹಿತಿದಾರರು ಅಪಾಯ ಎದುರುಗೊಳ್ಳಲು ಸಜ್ಜಾಗಿರುತ್ತಾರೆ. ಅವರು ಮಾಹಿತಿಯನ್ನು ನೀಡಲು ಮುಂದೆ ಬರುವಂತೆ ಸರ್ಕಾರದ ಪ್ರೋತ್ಸಾಹಕ ಕ್ರಮಗಳಿರಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಇದೇ ಸಂದರ್ಭದಲ್ಲಿ 1991ರಲ್ಲಿ ₹ 90 ಲಕ್ಷ ಮೌಲ್ಯದ ವಜ್ರದ ಕಳ್ಳಸಾಗಣೆ ಕುರಿತು ಮಾಹಿತಿ ನೀಡಿದ್ದ ಪ್ರಕರಣದಲ್ಲಿ ಮಾಹಿತಿದಾರನ ವಿಧವಾ ಪತ್ನಿಗೆ ಸೂಕ್ತ ಬಹುಮಾನ ನೀಡಬೇಕು ಎಂದು ಕೇಂದ್ರಕ್ಕೆ ನಿರ್ದೇಶಿಸಿತು.
ನ್ಯಾಯಮೂರ್ತಿಗಳಾದ ನಿತಿನ್ ಜಾಮದಾದ್ ಮತ್ತು ಅಭಯ್ ಅಹುಜಾ ಅವರಿದ್ದ ವಿಭಾಗೀಯ ಪೀಠ ಜ. 5ರಂದು ಈ ಬಗ್ಗೆ ಆದೇಶ ನೀಡಿದೆ. ವಿವರ ಈಗ ಲಭ್ಯವಾಗಿದೆ. ಸರ್ಕಾರದ ಇಲಾಖೆಗಳು ಅಗತ್ಯ ಕ್ರಮವಹಿಸಿ, ಬೊಕ್ಕಸಕ್ಕೆ ನಷ್ಟವಾಗುವುದನ್ನು ತಪ್ಪಿಸಬೇಕು ಎಂಬುದೇ ಮಾಹಿತಿದಾರರಿಗೆ ಬಹುಮಾನ ನೀಡುವುದರ ಉದ್ದೇಶ ಎಂದಿದೆ.
ಮಾಹಿತಿ ನೀಡಿದ್ದಕ್ಕಾಗಿ ತಮಗೆ ಸರ್ಕಾರದ ನೀತಿಯಂತೆ ಬಹುಮಾನ ನೀಡಲು ನಿರ್ದೇಶಿಸಬೇಕು ಎಂದು ಕೋರಿ ಚಂದ್ರಕಾಂತ್ ದಾವ್ರೆ ಅವರ ಪತ್ನಿ ಜಯಶ್ರೀ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸಿತು. 1991ರಲ್ಲಿ ಇವರು ನೀಡಿದ್ದ ಮಾಹಿತಿ ಆಧರಿಸಿ ಕಸ್ಟಮ್ಸ್ ಇಲಾಖೆಯವರು ವಜ್ರಗಳನ್ನು ಜಪ್ತಿ ಮಾಡಿದ್ದರು. ಮಾಹಿತಿದಾರರಿಗೆ ಕಂತುಗಳಲ್ಲಿ ₹ 3 ಲಕ್ಷ ನೀಡಲಾಗಿತ್ತು. ಹಲವು ಮನವಿ ನಂತರವೂ ಅಂತಿಮ ಮೊತ್ತ ಪಾವತಿಯಾಗಿರಲಿಲ್ಲ.
ಚಂದ್ರಕಾಂತ್ ಮೊದಲ ಮಾಹಿತಿದಾರರೇ ಎಂದು ಪರಿಶೀಲಿಸಬೇಕಿದೆ ಎಂದು ಇಲಾಖೆ ಪರ ವಕೀಲರು ಹೇಳಿದರು. ಇದನ್ನು ತಳ್ಳಿಹಾಕಿದ ಪೀಠ, ಈಗಾಗಲೇ ಮಾಹಿತಿದಾರರಿಗೆ ಎರಡು ಕಂತು ಪರಿಹಾರ ವಿತರಿಸಲಾಗಿದೆ ಎಂದಿತು. ಸರ್ಕಾರದ ಕ್ರಮ ಮಾಹಿತಿದಾರರನ್ನು ನಿರುತ್ಸಾಹಗೊಳಿಸುವಂತೆ ಇರಬಾರದು ಎಂದು ಅಭಿಪ್ರಾಯಪಟ್ಟಿತು.