ಲಖನೌ: ರಜೆ ಕೋರಿ ಉತ್ತರ ಪ್ರದೇಶದ ಪೊಲೀಸ್ ಕಾನ್ಸ್ಟೇಬಲ್ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನನ್ನ ಪತ್ನಿಗೆ ತುಂಬಾ ಕೋಪ ಬಂದಿದೆ ಮತ್ತು ನನ್ನ ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ರಜೆ ಬೇಕಿದೆ ಎಂದು ಕಾನ್ಸ್ಟೇಬಲ್ ಪತ್ರ ಬರೆದಿದ್ದಾರೆ.
ಪೊಲೀಸರಿಗೆ ರಜೆ ಸಿಗುವುದೇ ತುಂಬಾ ಅಪರೂಪ. ಹೊಸದಾಗಿ ಮದುವೆಯಾದವರು ಕೂಡ ಕೆಲವೊಮ್ಮೆ ಆದಷ್ಟು ಬೇಗನೇ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಇದೇ ಸಮಸ್ಯೆಯಿಂದ ತೊಂದರೆಗೀಡಾದ ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬರು ರಜೆ ಕೋರಿ ಅರ್ಜಿ ಬರೆದಿದ್ದಾರೆ. ನನಗೆ ರಜೆ ಸಿಗದ ಕಾರಣ ಪತ್ನಿ ಸಿಟ್ಟಿಗೆದ್ದು ಮತ್ತೆ ಮತ್ತೆ ಫೋನ್ ಡಿಸ್ಕನೆಕ್ಟ್ ಮಾಡುತ್ತಿದ್ದಾಳೆ ಎಂದು ಹಿರಿಯ ಅಧಿಕಾರಿಗೆ ಪತ್ರ ಬರೆದು ಕಾನ್ಸ್ಟೇಬಲ್ ತನ್ನ ಸಮಸ್ಯೆಗಳನ್ನು ವಿವರಿಸಿದ್ದಾರೆ. ಸಮಸ್ಯೆ ಎಷ್ಟು ಕುತೂಹಲಕಾರಿಯಾಗಿದೆ ಅಂದರೆ, ಇದೀಗ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.
ಪೇದೆಯನ್ನು ನೇಪಾಳ ಗಡಿಯಲ್ಲಿರುವ ಮಹಾರಾಜಗಂಜ್ ಜಿಲ್ಲೆಗೆ ಪೋಸ್ಟಿಂಗ್ ಹಾಕಲಾಗಿದೆ. ಜನವರಿ 10 ರಿಂದ ಒಂದು ವಾರಗಳ ಕಾಲ ರಜೆ ಕೊಡಿ ಎಂದು ಪೇದೆ ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ನಾನು ಕೇವಲ ಒಂದು ತಿಂಗಳ ಹಿಂದಷ್ಟೇ ಮದುವೆಯಾದೆ. ಅಂದಿನಿಂದ ನಿರಂತರವಾಗಿ ಕೆಲಸಕ್ಕೆ ಹಾಜರಾಗುತ್ತಲೇ ಇದ್ದೇನೆ. ನನಗೆ ರಜೆ ಸಿಗದ ಕಾರಣ ನನ್ನ ಪತ್ನಿ ತುಂಬಾ ಕೋಪಗೊಂಡಿದ್ದಾಳೆ. ಫೋನ್ ಮಾಡಿದರೆ ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ. ಎಷ್ಟು ಬಾರಿ ಫೋನ್ ಮಾಡಿದ್ರೂ ಸ್ಪಂದಿಸುತ್ತಿಲ್ಲ. ಆಕೆಯನ್ನು ಸಮಾಧಾನ ಮಾಡಬೇಕಿದೆ. ಹೀಗಾಗಿ ರಜೆ ಕೊಡಿ ಎಂದು ಕಾನ್ಸ್ಟೇಬಲ್ ಮನವಿ ಮಾಡಿದ್ದಾರೆ.
ಅಂದಹಾಗೆ ಮಹಾರಾಜ್‌ಗಂಜ್‌ನಲ್ಲಿ ನಿಯೋಜಿಸಲಾದ ಪೇದೆಯು ಮೌ ಜಿಲ್ಲೆಯ ನಿವಾಸಿ. ಪ್ರಸ್ತುತ ಇಂಡೋ-ನೇಪಾಳ ಗಡಿಯಲ್ಲಿ ಕೆಲಸ ಮಾಡುವ PRB ಯಲ್ಲಿ ನಿಯೋಜಿಸಲ್ಪಟ್ಟಿದ್ದಾರೆ. ಹೆಚ್ಚುವರಿ ಎಸ್ಪಿ ಅತಿಶ್ ಕುಮಾರ್ ಸಿಂಗ್ ಅವರು ಕಾನ್‌ಸ್ಟೆಬಲ್‌ಗೆ 5 ದಿನಗಳ ರಜೆ ನೀಡಿದ್ದಾರೆ.