ನವದೆಹಲಿ: ನೀವು ಎಲ್ಲಿಯಾದರೂ ಇಂತಹ ವಕೀಲರು ಇಂತಹ ಕೇಸ್ಗಳನ್ನು ನಿಭಾಯಿಸುವುದರಲ್ಲಿ ಪರಿಣಿತರು ಎಂಬಂತಹ ಬೋರ್ಡ್ ಅಥವಾ ಜಾಹೀರಾತು ನೋಡಿದ್ದೀರಾ? ಖಂಡಿತವಾಗಿಯೂ ಇದು ಸಾಧ್ಯವೇ ಇಲ್ಲ. ಏಕೆಂದರೆ ಭಾರತದಲ್ಲಿ ವಕೀಲರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಜಾಹೀರಾತು ನೀಡುವ ಹಾಗಿಲ್ಲ.
ಈಗ ಈ ವಿಚಾರ ಮುನ್ನೆಲೆಗೆ ಬರಲು ಕಾರಣವೇನು ಎಂದು ನೀವು ಅಂದುಕೊಳ್ಳುತ್ತಿದ್ದೀರಾ? ಇತ್ತೀಚೆಗೆ ಭಾರತದ ಫೋರ್ಬ್ಸ್ ಸಂಸ್ಥೆಯ ಟಾಪ್ 25 ವಕೀಲರ ಪಟ್ಟಿಯನ್ನು ಪ್ರಕಟ ಮಾಡಿತ್ತು. ಈ ವಿಚಾರವಾಗಿ ನಿನ್ನೆಯಷ್ಟೇ SCAORA (Supreme Court Advocates-on-Record Association) ಎನ್ನುವ ಸಂಘ ಫೋರ್ಬ್ಸ್ ಸಂಸ್ಥೆಯ ಈ ನಿರ್ಣಯವನ್ನು ಖಂಡಿಸಿದೆ.
ಇದೀಗ SCAORA ಸಂಘ, ಫೋರ್ಬ್ಸ್ ಪ್ರಕಟಿಸಿದ ಈ ಪಟ್ಟಿ ಅನಧಿಕೃತ ಹಾಗೂ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಖಂಡಿಸುವ ಬಗ್ಗೆ ಅವಿರೋಧವಾಗಿ ನಿರ್ಣಯ ತೆಗೆದುಕೊಂಡಿದೆ.
ವಕೀಲರು ಯಾಕೆ ಜಾಹೀರಾತು ನೀಡಬಾರದು?
ಭಾರತದಲ್ಲಿ, ವಕೀಲರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಜಾಹೀರಾತು ನೀಡಲು ಕಾನೂನು ಅನುಮತಿಸುವುದಿಲ್ಲ.
ವಕೀಲರ ಕಾಯಿದೆ, 1961 ರ ಸೆಕ್ಷನ್ 49(1)(c) ಪ್ರಕಾರ 'ವಕೀಲರು ಪಾಲಿಸಬೇಕಾದ ವೃತ್ತಿಪರ ನಡವಳಿಕೆ ಮತ್ತು ಶಿಷ್ಟಾಚಾರದ ಗುಣಮಟ್ಟ'ಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಮಾಡಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಗೆ ಅಧಿಕಾರ ನೀಡುತ್ತದೆ. 1975 ರಲ್ಲಿ ಪ್ರಕಟವಾದ BCI ನಿಯಮಗಳ ಭಾಗ VI ('ವಕೀಲರನ್ನು ನಿಯಂತ್ರಿಸುವ ಅಥವಾ ಗವರ್ನ್ ಮಾಡುವ ನಿಯಮಗಳು') ಅಧ್ಯಾಯ II ('ವೃತ್ತಿಪರ ನಡವಳಿಕೆ ಮತ್ತು ಶಿಷ್ಟಾಚಾರದ ಮಾನದಂಡಗಳು') ರಲ್ಲಿ ನಿಯಮ 36 ವಕೀಲರು ತಮ್ಮ ಕೆಲಸವನ್ನು ಜಾಹೀರಾತು ಮಾಡುವುದನ್ನು ನಿಷೇಧಿಸುತ್ತದೆ.
ನಿಯಮದ ಪ್ರಕಾರ 'ಒಬ್ಬ ವಕೀಲ, ನೇರವಾಗಿ ಅಥವಾ ಪರೋಕ್ಷವಾಗಿ ಜಾಹೀರಾತುಗಳು, ಸುತ್ತೋಲೆಗಳು, ಟೌಟ್‌ಗಳು, ವೈಯಕ್ತಿಕ ಸಂವಹನದ ಮೂಲಕ, ವೈಯಕ್ತಿಕ ಸಂಬಂಧಗಳಿಂದ ಸಮರ್ಥಿಸದ ಸಂದರ್ಶನಗಳು, ತೊಡಗಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಿಗೆ ಕಾಮೆಂಟ್‌ಗಳನ್ನು ಒದಗಿಸುವುದು ಅಥವಾ ಪ್ರೇರೇಪಿಸುವುದು ಅಥವಾ ಪ್ರಕಟಿಸಲು ಅವರ ಫೋಟೋಗಳನ್ನು ತಯಾರಿಸುವುದು, ಹೀಗೆ ಯಾವುದನ್ನೂ ಮಾಡಬಾರದು'
1975 ರ ತೀರ್ಪಿನಲ್ಲಿ, 'ಬಾರ್ ಕೌನ್ಸಿಲ್ ಆಫ್ ಮಹಾರಾಷ್ಟ್ರ ವರ್ಸಸ್ ಎಂವಿ ದಾಭೋಲ್ಕರ್' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಇದಕ್ಕೆ ತರ್ಕವನ್ನು ಒದಗಿಸಿದ್ದರು. 'ಕಾನೂನು ವ್ಯಾಪಾರವಲ್ಲ. ಆದ್ದರಿಂದ ವಾಣಿಜ್ಯ ಸ್ಪರ್ಧೆ ಅಥವಾ ಸಂಗ್ರಹಣೆಯ ಮೂಲಕ ವಕೀಲ ವೃತ್ತಿಯನ್ನು ಅಶ್ಲೀಲಗೊಳಿಸಿದಂತೆ ಆಗುತ್ತದೆ. ಹೀಗಾಗಿ ನೈತಿಕ ನೆಲೆಗಟ್ಟಿನಲ್ಲಿ ಭಾರತದಲ್ಲಿ ವಕೀಲರು ಜಾಹೀರಾತು ನೀಡಿ ನ್ಯಾಯವನ್ನು ವ್ಯಾಪಾರದ ರೀತಿ ಮಾಡುವುದಿಲ್ಲ.