ನವದೆಹಲಿ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾಗಿರುವ ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್ ಅಂಗವಾಗಿ ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯದ ಕೊನೇ ಕ್ಷಣದ ಕೆಲಸಕಾರ್ಯಗಳು ಭರದಿಂದ ಸಾಗಿವೆ.
ಈ ನೂತನ ಸಂಸತ್ ಕಟ್ಟಡ ಮತ್ತು ಸೆಂಟ್ರಲ್ ವಿಸ್ತಾ ಮರುಅಭಿವೃದ್ಧಿ ಕಾಮಗಾರಿಯ ಹೊಣೆ ಹೊತ್ತುಕೊಂಡಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತನ್ನ centralvista.gov.in ವೆಬ್‌ಸೈಟ್‌ನಲ್ಲಿ ನೂತನ ತ್ರಿಕೋನಾಕೃತಿಯ ಸಂಸತ್ ಕಟ್ಟಡದ ಒಳಾಂಗಣದ ಫೋಟೋಗಳನ್ನು ಪ್ರಕಟಿಸಿದೆ.
ಲೋಕಸಭಾ ಚೇಂಬರ್‌ನಲ್ಲಿ ಕೊನೇ ಕ್ಷಣದ ಕೆಲವೊಂದು ಫಿನಿಶಿಂಗ್ ಕೆಲಸ ಕಾರ್ಯಗಳಲ್ಲಿ ಕಾರ್ಮಿಕರು ಮಗ್ನರಾಗಿರುವುದು ಸಚಿವಾಲಯ ಪ್ರಕಟಿಸಿರುವ ಫೋಟೋಗಳಲ್ಲಿ ಕಾಣಿಸುತ್ತದೆ.
ನಿಗದಿತ ಗಡುವಿನ ಪ್ರಕಾರ ಯೋಜನೆ ನವೆಂಬರ್ 2022 ರಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಆದರೆ ಜನವರಿ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ಅಧಿಕಾರಿಗಳದ್ದಾಗಿದೆ. ಆದರೆ ಬಜೆಟ್ ಅಧಿವೇಶನ ನೂತನ ಕಟ್ಟಡದಲ್ಲಿ ನಡೆಯಲಿದೆಯೇ ಅಥವಾ ಬಜೆಟ್ ಅಧಿವೇಶದ ದ್ವಿತೀಯಾರ್ಧ ಈ ಹೊಸ ಕಟ್ಟಡದಲ್ಲಿ ನಡೆಯಲಿದೆಯೆ ಎಂಬ ಬಗ್ಗೆ ಸರ್ಕಾರ ಇನ್ನೂ ಮಾಹಿತಿ ನೀಡಿಲ್ಲ.
ನೂತನ ಸಂಸತ್ ಕಟ್ಟಡವನ್ನು ಸಜ್ಜಾಗಿಸಲು ರೂ 9.29 ಕೋಟಿ ಮೊತ್ತದ ಟೆಂಡರ್ ಎನ್ನು ಕೇಂದ್ರ ಲೋಕೋಪಯೋಗಿ ಇಲಾಖೆ ಈ ವಾರ ನೀಡಿದೆ. ಈ ಕಟ್ಟಡದಲ್ಲಿ 36 ತಿಂಗಳವರೆಗೆ ಯಾಂತ್ರೀಕೃತ ಹೌಸ್‌ಕೀಪಿಂಗ್ ಸೌಲಭ್ಯ ಒದಗಿಸಲು ರೂ 24.56 ಕೋಟಿ ಮೊತ್ತದ ಟೆಂಡರ್ ಕೂಡ ನೀಡಲಾಗಿದೆ.
ಈ ಸಂಪೂರ್ಣ ಸೆಂಟ್ರಲ್ ವಿಸ್ತಾ ಯೋಜನೆಯ ಗುತ್ತಿಗೆಯನ್ನು 2020 ರಲ್ಲಿ ಟಾಟಾ ಪ್ರಾಜೆಕ್ಟ್ಸ್ ಸಂಸ್ಥೆಗೆ ರೂ 861.9 ಕೋಟಿ ಮೊತ್ತಕ್ಕೆ ವಹಿಸಲಾಗಿತ್ತು. ಆದರೆ ಈಗ ಯೋಜನಾ ಮೊತ್ತ ರೂ 1,200 ಕೋಟಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ನಿರ್ಮಾಣ ಕಾಮಗಾರಿಗಳ ಜಿಎಸ್‌ಟಿ ಶೇ 12 ರಿಂದ ಶೇ 18 ಗೆ ಏರಿಕೆಯಾಗಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಕಟ್ಟಡ ವಿನ್ಯಾಸವನ್ನು ಅಹ್ಮದಾಬಾದ್ ಮೂಲದ ಎಚ್‌ಸಿಪಿ ಡಿಸೈನ್, ಪ್ಲಾನಿಂಗ್ ಎಂಡ್ ಮ್ಯಾನೇಜ್ಮೇಂಟ್ ಸಂಸ್ಥೆ ಆರ್ಕಿಟೆಕ್ಟ್ ಬಿಮಲ್ ಪಟೇಲ್ ಅವರ ಮುಂದಾಳತ್ವದಲ್ಲಿ ಸಿದ್ಧಪಡಿಸಿತ್ತು. ಜನವರಿ 2021 ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಹೊಸ ಲೋಕಸಭಾ ಚೇಂಬರ್‌ನಲ್ಲಿ 888 ಆಸನಗಳಿರಲಿವೆ. ರಾಜ್ಯಸಭಾ ಚೇಂಬರಿನಲ್ಲಿ 384 ಆಸನಗಳಿವೆ.
ರಾಜ್ಯಸಭೆಯ ಒಳಾಂಗಣ ತಾವರೆ ಥೀಮ್ ಹೊಂದಿದ್ದರೆ ಲೋಕಸಭೆಯಲ್ಲಿ ನವಿಲಿನ ಚಿತ್ರಗಳ ಒಳಾಂಗಣವಿದೆ. ಈಗಿನ ಸಂಸತ್ ಕಟ್ಟಡದಂತೆ ಈ ಹೊಸ ಕಟ್ಟಡದಲ್ಲಿ ಸೆಂಟ್ರಲ್ ಹಾಲ್ ಇಲ್ಲ, ಬದಲಿಗೆ ಲೋಕಸಭಾ ಚೇಂಬರ್ ಅನ್ನು ಜಂಟಿ ಅಧಿವೇಶನಗಳಿಗೆ ಬಳಸಲಾಗುವುದು.