ವಿಶಾಖಪಟ್ಟಣ: ಜ.15ರಂದು ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ ಪಡೆಯಲಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಧ್ವಂಸಗೊಳಿಸಿದ ಆರೋಪದ ಮೇಲೆ ಮೂವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಅಪರಿಚಿತ ದುಷ್ಕರ್ಮಿಗಳು ಬುಧವಾರ ರಾತ್ರಿ ಹೊಸ ರೈಲಿಗೆ ಕಲ್ಲೆಸೆದು ಕಿಟಕಿಗಳನ್ನು ಒಡೆದು ಹಾಕಿದ್ದರು.ಪ್ರಕರಣದ ಬೆನ್ನತ್ತಿದ ಪೊಲೀಸರು ಗುರುವಾರ ಆರೋಪಿಗಳನ್ನು ಬಂಧಿಸಿದ್ದಾರೆ.
'ಆರೋಪಿಗಳು ಪಾನಮತ್ತರಾಗಿ ಈ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದರು' ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ರೈಲ್ವೆ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದ್ದು, ರೈಲ್ವೆ ಭದ್ರತಾ ಪಡೆ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಚರಪಾಲೆಂನ ಕೋಚ್ ಕಾಂಪ್ಲೆಕ್ಸ್ ಬಳಿ ಘಟನೆ ನಡೆದಿದೆ. ಒಂದು ಕಿಟಕಿಯ ಗಾಜು ಸಂಪೂರ್ಣ ಒಡೆದಿದ್ದು, ಮತ್ತೊಂದು ಕಿಟಕಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಿರ್ವಹಣೆ ತಪಾಸಣೆ ಮತ್ತು ಪ್ರಾಯೋಗಿಕ ಓಡಾಟಕ್ಕಾಗಿ ಬುಧವಾರ ರೈಲು ಚೆನ್ನೈನಿಂದ ವಿಶಾಖಪಟ್ಟಣಕ್ಕೆ ಆಗಮಿಸಿತ್ತು.
ಜ.19ರಂದು ಹೈದರಾಬಾದ್ ಭೇಟಿ ವೇಳೆ ಪ್ರಧಾನಿ ಮೋದಿ ಈ ರೈಲಿಗೆ ಚಾಲನೆ ನೀಡಬೇಕಾಗಿತ್ತು. ಆದರೆ ಅವರ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಹೀಗಾಗಿ ಜ.15ರಂದು ವರ್ಚ್ಯುವಲ್ ಆಗಿ ಪ್ರಧಾನಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ.