ಕಾಸರಗೋಡು: ಜಿಲ್ಲೆಯ ಜೀವಸಂಕುಲಗಳಿಗೆ ಹಾನಿಮಾಡುವ ರೀತಿಯ ಬೃಹತ್ ಕರ್ಗಲ್ಲು ಕ್ವಾರಿಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಾಳೆ(ಜ.10ರಂದು) ಬೆಳಗ್ಗೆ 10ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.
ಗಣಿಗಾರಿಕೆ ವಲಯದಲ್ಲಿನ ಮಹಿಳಾ ಹೋರಾಟಗಾರರು ದೀವಟಿಗೆಯಲ್ಲಿ ಬೆಂಕಿ ಪ್ರಜ್ವಲಿಸುವ ಮೂಲಕ ಧರಣೀಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖ ಹದಿನೇಳು ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಬಹುತೇಕ ಕ್ವಾರಿಗಳ ವಿರುದ್ಧ ಜನತೆ ಹೋರಾಟದಲ್ಲಿ ಕೈಜೋಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ 90ರಷ್ಟು ಹೊಸ ಕ್ವಾರಿಗಳಿಗೆ ಅನುಮತಿಗಾಗಿ ಕಾಯುತ್ತಿದೆ.
ಆರಂಭದಲ್ಲಿ ಒಂದು ಎಕರೆ ಭೂಮಿಯಲ್ಲಿ ಖನನ ಆರಂಭಿಸಿ, ನಂತರದ ದಿನಗಳಲ್ಲಿ ಜಾಗ ಅತಿಕ್ರಮಣ ನಡೆಯುತ್ತಾ ಸಾಗುತ್ತದೆ.
ವೆಳ್ಳರಿಕುಂಡ್ ತಾಲೂಕು ಕ್ವಾರಿಗಳ ತಾಣವಾಗಿ ಮಾರ್ಪಾಡಾಗಿದ್ದು, ಮಲೆನಾಡು ಪ್ರದೇಶದಲ್ಲಿ ನೀರಿನ ಕಣಿವೆಗಳು ಮಾಯವಾಗುತ್ತಿದ್ದು, ಪಾರಂಪರಿಕ ನೀರಿನ ಮೂಲಗಳು ವಿನಾಶದ ಅಂಚಿಗೆ ಸಗುತ್ತಿದೆ.
ಪ್ರೊ. ಮಾಧವ ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿ ಕಾಸರಗೋಡಿಗೆ ಅನ್ವಯವಾಗದ ಹಿನ್ನೆಲೆಯಲ್ಲಿ ಇತರ ಜಿಲ್ಲೆಗಳ ಗಣಿ ಮಾಫಿಯಾಗಳು ಕಾಸರಗೋಡಿನತ್ತ ಮುಖ ಮಾಡುತ್ತಿದ್ದಾರೆ.
ಕಡಲಾಡಿಪ್ಪಾರ ಮತ್ತು ಕರಿಂದಳದಲ್ಲಿ ಗಣಿಗಾರಿಕೆ ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಬೃಹತ್ ಕ್ವಾರಿಗಳನ್ನು ತೆಗೆಯಲು ಮುಂದಾಗಬೇಕು ಎಂದು ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ಆಗ್ರಹಿಸಿದೆ. ಕವಲಪ್ಪಾರೆ, ಪುತ್ತುಮಲೆಯಂತಹ ಅನೇಕ ಮಾನವ ನಿರ್ಮಿತ ವಿಪತ್ತುಗಳಿಗೆ ಸಾಕ್ಷಿಯಾಗಿರುವ ಕೇರಳ, ಸರ್ಕಾರವು ಅನುಭವದಿಂದ ಪಾಠ ಕಲಿತು ಇಂತಹ ಅನಾಹುತಗಳು ಮರುಕಳಿಸದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಹೋರಟಗಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೃಹತ್ ಕರ್ಗಲ್ಲು ಕ್ವಾರಿ ವಿರುದ್ಧ ಪರಿಸರ ಸಮಿತಿಯಿಂದ ನಾಳೆ ಪ್ರತಿಭಟನೆ
0
ಜನವರಿ 08, 2023