ಬೆಂಗಳೂರು: ಹಿಮಯುಗದಲ್ಲಿ ಭೂಮಿಯ ಸಮೀಪ ಬಂದಿದ್ದ ಹಸಿರು ಧೂಮಕೇತು 50 ಸಾವಿರ ವರ್ಷಗಳ ಬಳಿಕ ಭೂಮಿಯ ಅತಿ ಸಮೀಪಕ್ಕೆ ಬರುತ್ತಿದೆ. ಜ.29 ರಂದು ನಸುಕಿನಲ್ಲಿ ಉತ್ತರಧ್ರುವ ನಕ್ಷತ್ರದ ಸಮೀಪ ಇದು ಕಾಣಿಸಿಕೊಳ್ಳಲಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ತಜ್ಞರು ತಿಳಿಸಿದ್ದಾರೆ.
'ನಸುಕಿನ 3 ಗಂಟೆಯಲ್ಲಿ ಉತ್ತರ ದಿಕ್ಕಿನ ಡ್ರಾಕೊ ನಕ್ಷತ್ರಪುಂಜದ ಸಮೀಪ ಧೂಮಕೇತುವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದಾಗಿದೆ. ಫೆ.1 ಹಾಗೂ 2 ರಂದು ಭೂಮಿಗೆ ಅತ್ಯಂತ ಹತ್ತಿರಕ್ಕೆ ಬರಲಿದೆ. ಅಂದು ನಸುಕಿನಲ್ಲಿ ಸಪ್ತರ್ಷಿ ಮಂಡಲದ ಸಮೀಪ ಇದನ್ನು ಕಣ್ತುಂಬಿಕೊಳ್ಳಬಹುದಾಗಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಸ್ವಚ್ಛ ನೀಲಾಕಾಶದಲ್ಲಿ ಈ ಅದ್ಭುತ ದೃಶ್ಯವನ್ನು ಪ್ರತಿಯೊಬ್ಬರೂ ನೋಡಬಹುದಾಗಿದೆ. ಇದೊಂದು ವಿಭಿನ್ನ ರೀತಿಯ ಧೂಮಕೇತುವಾಗಿದ್ದು, ಸೌರವ್ಯೂಹದ ಆಚೆಗೆ ಇರುವ ಊರ್ತ್ ಕ್ಲೌಡ್‌ನಿಂದ ಹೊರಬಂದು ಹಸಿರು ಧೂಮಕೇತು ಎಂದು ಕರೆಸಿಕೊಂಡಿದೆ. ಇದು ಭೂಮಿಯಿಂದ 16 ಕೋಟಿ ಕಿ.ಮೀ ದೂರವಿದ್ದು, ಈಗ 4.2 ಕೋಟಿ ಕಿ.ಮೀ ಸಮೀಪಕ್ಕೆ ಬರಲಿದೆ. ಇದು ಮತ್ತೊಮ್ಮೆ ಭೂಮಿ ಸಮೀಪಕ್ಕೆ ಬರಲು 50 ಸಾವಿರ ವರ್ಷಗಳು ಬೇಕು' ಎಂದು ಮಾಹಿತಿ ನೀಡಿದ್ದಾರೆ.