ಹೈದರಾಬಾದ್: ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಎನ್ನಲಾದ ತಿರುಮಲ ದೇವಸ್ಥಾನದ ಕಿರು ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಕುರಿತು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ತನಿಖೆ ಆರಂಭಿಸಿದೆ.
'ಆಗಮ ಶಾಸ್ತ್ರಗಳ ಪ್ರಕಾರ ವೆಂಕಟೇಶ್ವರ ದೇವರ ದೇಗುಲದ ಮೇಲ್ಭಾಗದಲ್ಲಿ ಯಾವುದೇ ವಸ್ತುಗಳ ಹಾರಾಟಕ್ಕೆ ಅನುಮತಿ ಇಲ್ಲ' ಎಂದು ಮೂಲಗಳು ತಿಳಿಸಿವೆ.
ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮುಖ್ಯ ದೇಗುಲದ ಎದುರು ಪಶ್ಚಿಮದ ಕಡೆಗೆ ಚಲಿಸಿ ದೇವಾಲಯದ ಗೋಪುರ, ಆನಂದ ನಿಲಯಂ, ಗರ್ಭಗುಡಿಯ ವೈಮಾನಿಕ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ ಎಂದೂ ಹೇಳಿದೆ.
ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊ ಹರಿದಾಡಿದ ಬಳಿಕ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.
'ಹೈದರಾಬಾದ್ ಮೂಲದ ಸಂಸ್ಥೆಯೊಂದು ಈ ವಿಡಿಯೊವನ್ನು ಪೋಸ್ಟ್ ಮಾಡಿದೆ. ಸಂಸ್ಥೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು' ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ವಿಡಿಯೊ ತುಣುಕನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದೂ ಹೇಳಿದ್ದಾರೆ.
'ಇದು ನಿಜವಾಗಿಯೂ ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯವೇ ಅಥವಾ ಹಳೆಯ ಚಿತ್ರಗಳನ್ನು ತಿರುಚಿ ಭಕ್ತರನ್ನು ದಾರಿತಪ್ಪಿಸಲು ಬಳಸಲಾಗಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಶೀಘ್ರ ಸತ್ಯಾಂಶ ಹೊರಬೀಳಲಿದೆ' ಎಂದೂ ಹೇಳಿದ್ದಾರೆ.
'ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂಬುದು ಆಧಾರರಹಿತ' ಎಂದು ಟಿಟಿಡಿಯ ಮುಖ್ಯ ವಿಚಕ್ಷಣಾ ಮತ್ತು ಭದ್ರತಾ ಅಧಿಕಾರಿ ನರಸಿಂಹ ಕಿಶೋರ್ ಹೇಳಿದ್ದಾರೆ.