ಹೆರಿಗೆಯ ಬಳಿಕ ಖಿನ್ನತೆ ತುಂಬಾನೇ ಅಪಾಯಕಾರಿ. ಇದನ್ನು ಆಡು ಭಾಷೆಯಲ್ಲಿ ಬಾಣಂತಿ ಸನ್ನಿ ಎಂದು ಕರೆಯಲಾಗುವುದು. ಹೆರಿಗೆಯ ಬಳಿಕ ಖಿನ್ನತೆಗೆ ಹಲವಾರು ಕಾಣಗಳಿಂದ ಉಂಟಾಗಬಹುದು, ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಅವರ ಪ್ರಾಣಕ್ಕೆ ಅಪಾಯ ತಂದುಕೊಳ್ಳಬಹುದು, ಆದ್ದರಿಂದ ಬಾಣಂತಿ ಸನ್ನಿ ನಿರ್ಲಕ್ಷ್ಯ ಮಾಡಲೇಬೇಡಿ.
ಏನಾದರೂ ಅಪಾಯ ತಂದುಕೊಂಡ ಮೇಲೆ ಅವಳಿಗೆ ಬಾಣಂತಿ ಸನ್ನಿ ಇದ್ದಿದ್ದು ಗೊತ್ತೇ ಆಗಲಿಲ್ಲ ಎಂದು ಮನೆಯವರು ಹೇಳುತ್ತಾರೆ, ಆದರೆ ಬಾಣಂತಿ ಸನ್ನಿ ಲಕ್ಷಣಗಳು ಕಂಡು ಬಂದಿರುತ್ತದೆ, ನೀವು ಗಮನಿಸಿರಲ್ಲ ಅಷ್ಟೇ, ಈ ಬಾಣಂತಿ ಸನ್ನಿ ಲಕ್ಷಣಗಳೇನು, ಯಾರಲ್ಲಿ ಈ ಬಗೆಯ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು ಎಂದು ನೋಡೋಣ ಬನ್ನಿ:
ಪ್ರತೀ 10ರಲ್ಲಿ ಒಬ್ಬ ಮಹಿಳೆಗೆ ಕಾಡುತ್ತೆ ಬಾಣಂತಿ ಸನ್ನಿ
ಸಿಡಿಸಿ ಅಧ್ಯಯನ ಪ್ರಕಾರ 10ರಲ್ಲಿ ಒಬ್ಬ ಮಹಿಳೆಗೆ ಹೆರಿಗೆಯ ಬಳಿಕ ಬಾಣಂತಿ ಸನ್ನಿ ಕಾಡುತ್ತೆ. ಬಡವರು-ಶ್ರೀಮಂತರು ಅಂತ ಇಲ್ಲದೆ ಬಾಣಂತಿ ಸನ್ನಿ ಕಾಡುವುದು. ಆದರೆ ಬಾಣಂತಿ ಸನ್ನಿಗೆ ಸೂಕ್ತ ಚಿಕಿತ್ಸೆ ನೀಡಬೇಕು, ಆಗ ಮತ್ತೆ ಮೊದಲಿನಂತಾಗುತ್ತಾರೆ. ಈ ಸಮಯದಲ್ಲಿ ಗಂಡ ಹಾಗೂ ಮನೆಯವರ ಬೆಂಬಲ ತುಂಬಾನೇ ಮುಖ್ಯವಾಗುತ್ತೆ.
ಖಿನ್ನತೆಯ ಲಕ್ಷಣಗಳೇನು
* ಬೇಸರದಿಂದಿರುವುದು, ಮುಖದಲ್ಲಿ ನಗುವೇ ಇಲ್ಲ
* ಜೀವನ ಜಿಗುಪ್ಸೆ ಬಂದಂತೆ ಮಾತನಾಡುವುದು
* ನಾನು ಯಾವುದಕ್ಕೂ ಪ್ರಯೋಜನವಿಲ್ಲದವಳು ಎಂದು ಭಾವಿಸುವುದು,
* ಒಂಥರ ಕಿರಿಕಿರಿ ಅಸ್ವಸ್ಥತೆ
* ಮಗುವಿನ ಕಡೆ ಗಮನ ಇಲ್ಲ
* ಸುಸ್ತು
* ಮರೆವು
* ಸರಿಯಾಗಿ ನುದ್ದೆ ಮಾಡುವುದಿಲ್ಲ ಅಥವಾ ತುಂಬಾ ನಿದ್ದೆ ಮಾಡುವುದು
* ಆತ್ಮಹತ್ಯೆ ಆಲೋಚನೆ'
* ಮೈಕೈ ನೋವು, ಚಿಕಿತ್ಸೆ ನೀಡಿದರೂ ಕಡಿಮೆಯಾಗದಿರುವುದು.
ಬಾಣಂತಿ ಸನ್ನಿಯ ಲಕ್ಷಣಗಳಿಗೂ ಖಿನ್ನತೆಯ ಲಕ್ಷಣಗಳಿಗೂ ವ್ಯತ್ಯಾಸವಿರಲ್ಲ
* ಕಾರಣವಿಲ್ಲದೆ ಅಥವಾ ಚಿಕ್ಕಪುಟ್ಟ ವಿಷಯಗಳಿಗೆ ಬೇಸರ ಮಾಡಿಕೊಂಡು ಅಳುವುದು
* ತುಂಬಾ ಕೋಪ
* ಒಂಟಿಯಾಗಿ ಇರಲು ಇಷ್ಟಪಡುವುದು
* ಮಗುವಿನ ಆರೈಕೆ ಕಡೆ ಗಮನ ನೀಡದಿರುವುದು
* ನಾನು ಒಳ್ಳೆಯ ತಾಯಿಯಲ್ಲ ಎಂದು ಹೇಳುವುದು
* ನಾನು ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ಎಂದು ಸಂಶಯ ವ್ಯಕ್ತಪಡಿಸುವುದು
ಈ ರೀತಿಯ ಕಾರಣಗಳಿಂದ ಖಿನ್ನತೆ ಕಾಡುವುದು
* ತುಂಬಾ ಮಾನಸಿಕ ಒತ್ತಡ
* ಮನೆಯವರ ಬೆಂಬಲ ಇಲ್ಲದಿರುವುದು
* ಈ ಹಿಂದೆ ಖಿನ್ನತೆ ಇದ್ದರೆ
* ಮನೆಯಲ್ಲಿ ಯಾರಿಗಾದರೂ ಖಿನ್ನತೆ ಕಾಡಿದ್ದರೆ
* ಗರ್ಭಧಾರಣೆಗೆ ಕಷ್ಟವಾಗಿದ್ದರೆ
* ಅವಳಿ ಅಥವಾ ತ್ರಿವಳಿ ಮಕ್ಕಳಾದರೆ ನೋಡಿಕೊಳ್ಳುವುದು ತುಂಬಾನೇ ಕಷ್ಟ, ಆಗ ಮನೆಯವರ ಬೆಂಬಲ ಸಿಗದಿದ್ದರೆ
* ತುಂಬಾ ಚಿಕ್ಕ ಪ್ರಾಯದಲ್ಲಿಯೇ ತಾಯಿಯಾದರೆ
* 37 ವಾರಕ್ಕೆ ಮೊದಲೇ ಮಗುವಿನ ಜನನವಾದರೆ
* ಹೆರಿಗೆಯಲ್ಲಿ ಕಷ್ಟವಾದರೆ
* ಮಗುವಿನಲ್ಲಿ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ
ತಂದೆಗೂ ಕಾಡುವುದೇ ಖಿನ್ನತೆ
ಮಕ್ಕಳಾದ ಮೇಲೆ ಕೆಲ ತಂದೆಯರಿಗೂ ಖಿನ್ನತೆ ಕಾಡುವುದು ಎಂದು ಅಧ್ಯಯನವರದಿ ಹೇಳಿದೆ. ಹೆಚ್ಚಾದ ಜವಾಬ್ದಾರಿ, ಆರ್ಥಿಕ ತೊಂದರೆ, ಮಗುವಿನಲ್ಲಿ ಏನಾದರೂ ಸಮಸ್ಯೆಯಿದ್ದರೆ ಈ ಎಲ್ಲಾ ಕಾರಣಗಳಿಂದ ಕೆಲ ತಂದೆಯರಲ್ಲೂ ಖಿನ್ನತೆ ಕಾಡುವುದು.
ಚಿಕಿತ್ಸೆ
ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ಹಾಗೇ ಬಿಟ್ಟರೆ ಅವರು ಅವರ ಪ್ರಾಣಕ್ಕೆ ಅಪಾಯ ತಂದುಕೊಳ್ಳಬಹುದು. ಆದ್ದರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು, ಅದರ ಜೊತೆಗೆ ಮನೆಯವರ ಹಾಗೂ ಗಂಡನ ಸಹಕಾರ ತುಂಬಾನೇ ಮುಖ್ಯವಾಗುತ್ತದೆ. ಮಗುವಿನ ಆರೈಕೆ ಅವಳ ಜವಾಬ್ದಾರಿ ಅಂತ ಬಿಡದೆ ಅವಳಿಗೆ ಸಹಾಯ ಮಾಡಿದರೆ ಅವಳು ಮಾನಸಿಕ ಖಿನ್ನತೆಯಿಂದ ಹೊರಬಂದು ಸಹಜ ಬದುಕಿಗೆ ಮರಳುತ್ತಾಳೆ.
ಬಾಣಂತಿ ಸನ್ನಿ ಯಾವಾಗ ಕಾಡುತ್ತದೆ?
ಕೆಲವರಿಗೆ ಹೆರಿಗೆಯಾಗಿ ಕೆಲವು ದಿನಗಳಲ್ಲಿ ಕಾಡಿದರೆ ಇನ್ನು ಕೆಲವರಿಗೆ ಕೆಲವು ತಿಂಗಳಾದ ಬಳಿಕ ಕಾಡುವುದು. ಹೆರಿಗೆಯಾದ ಬಳಿಕ ಅವರ ಗುಣದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಅವರನ್ನು ದೂಷಿಸಬೇಡಿ, ಬದಲಿಗೆ ಅವರ ಮಾನಸಿಕ ಸ್ಥಿತಿ ಅರ್ಥಮಾಡಿಕೊಂಡು ಅವರ ಜೊತೆ ಸಹಾನುಭೂತಿಯಿಂದ ವರ್ತಿಸಿ, ಅವರ ಕೆಲಸ ಕಾರ್ಯಗಳಿಗೆ ಸಹಾಯ ಮಾಡಿದರೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿ ಬಾಣಂತಿ ಸನ್ನಿ ಕಡಿಮೆಯಾಗುವುದು.