ನವದೆಹಲಿ: ಭಾರತೀಯ ಸೇನೆ ನಡೆಸಿದ್ದ ನಿರ್ದಿಷ್ಟ ದಾಳಿಗಳ ಕುರಿತು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಹೇಳಿಕೆ ನೀಡಿರುವುದು ವಿವಾದಕ್ಕೆ ಗ್ರಾಸವಾಗಿರುವ ಬೆನ್ನಲ್ಲೇ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ನಿವೃತ್ತ ಏರ್ ಮಾರ್ಷಲ್ ರಘುನಾಥ್ ನಂಬಿಯಾರ್ ಅವರು 'ಬಾಲಾಕೋಟ್ ವಾಯುದಾಳಿಯು ದೊಡ್ಡಮಟ್ಟದ ಗೆಲುವು' ಎಂದಿರುವ ವಿಡಿಯೊ ತುಣುಕನ್ನು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೊ ಜೊತೆ 'ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಸೇನೆಯನ್ನು ಪ್ರಶ್ನಿಸುವವರಿಗೆ ಇದೇ ಉತ್ತರ' ಎಂದು ಅವರು ಅಡಿಬರಹ ಬರೆದಿದ್ದಾರೆ.
ದಿಗ್ವಿಜಯ್ ಸಿಂಗ್ ಅವರನ್ನು ಉಲ್ಲೇಖಿಸಿ ಮಾತನಾಡಿರುವ ರಘುನಾಥ್ ಅವರು, 'ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಬಾಲಕೋಟ್ ವಾಯುದಾಳಿ ನಡೆದ ಎರಡು ದಿನಗಳ ಬಳಿಕ ನಾನು ಪಶ್ಚಿಮ ಸೈನ್ಯ ವಿಭಾಗದ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡೆ. ಅಲ್ಲಿ ಏನು ನಡೆದಿತ್ತು ಎಂಬುದು ನನಗೆ ತಿಳಿದಿದೆ' ಎಂದು ಹೇಳಿದ್ದಾರೆ.
'ಯುದ್ಧವಿಮಾನಗಳ ಪೈಲೆಟ್‌ಗಳಿಗೆ ನಾವು ನಿಗದಿಪಡಿಸಿದ್ದ ಗುರಿಯನ್ನು ಅವರು ಸಾಧಿಸಿದ್ದಾರೆ. ಸುಳ್ಳುಗಳಿಗೆ ಕಿವಿಗೊಡಬೇಡಿ. ಬಾಲಾಕೋಟ್ ವಾಯುದಾಳಿ ದೊಡ್ಡ ಮಟ್ಟದ ಯಶಸ್ಸು' ಎಂದು ಅವರು ಹೇಳಿದ್ದಾರೆ.
2019ರ ಫೆಬ್ರುವರಿ 14ರಂದು ನಡೆದಿದ್ದ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು, ಪಾಕಿಸ್ತಾನದ ಉಗ್ರರ ಅಡಗುತಾಣವಾದ ಬಾಲಾಕೋಟ್ ಮೇಲೆ ಫೆಬ್ರುವರಿ 26ರಂದು ವಾಯುದಾಳಿ ನಡೆಸಿತ್ತು.