ನವದೆಹಲಿ: ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ಡಿ.ವೈ.ಚಂದ್ರಚೂಡ್ ಅವರು ಶುಕ್ರವಾರ ಭಿನ್ನ ಸಾಮರ್ಥ್ಯದ ತನ್ನಿಬ್ಬರು ಸಾಕುಪುತ್ರಿಯರೊಂದಿಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಆಗಮಿಸಿದ್ದು ಹಿರಿಯ ನ್ಯಾಯಾಧೀಶರು ಮತ್ತು ವಕೀಲರನ್ನು ಅಚ್ಚರಿಯಲ್ಲಿ ಕೆಡವಿತ್ತು.
ಸಿಜೆಐ ಮಕ್ಕಳನ್ನು ನ್ಯಾಯಾಲಯದ ಹಾಲ್ ಮತ್ತು ತನ್ನ ಚೇಂಬರ್ಗೆ ಕರೆದೊಯ್ದು ತೋರಿಸಿದರು.
ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಸರ್ವೋಚ್ಚ ನ್ಯಾಯಾಲಯದ ಆವರಣವನ್ನು ಪ್ರವೇಶಿಸಿದ ನ್ಯಾ.ಚಂದ್ರಚೂಡ್ ಅವರು ಸಾರ್ವಜನಿಕ ಗ್ಯಾಲರಿಯ ಮೂಲಕ ಪುತ್ರಿಯರೊಂದಿಗೆ ಕೋರ್ಟ್ ರೂಮ್ ಪ್ರವೇಶಿಸಿದರು. ಬಳಿಕ ಅವರನ್ನು ರೂಮ್ ನಂ.1ರಲ್ಲಿಯ ಸಿಜೆಐ ಕೋರ್ಟ್ಗೆ ಕರೆದೊಯ್ದು ನ್ಯಾಯಾಲಯವು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸಿದರು.
ನ್ಯಾಯಾಧೀಶರು
ಎಲ್ಲಿ ಆಸೀನರಾಗಿರುತ್ತಾರೆ ಮತ್ತು ವಕೀಲರು ಎಲ್ಲಿಂದ ವಾದಿಸುತ್ತಾರೆ ಎನ್ನುವುದನ್ನೂ
ಪುತ್ರಿಯರಾದ ಮಾಹಿ (16) ಮತ್ತು ಪ್ರಿಯಾಂಕಾ (20) ಅವರಿಗೆ ತೋರಿಸಿದರು. ಬಳಿಕ
ಮಕ್ಕಳನ್ನು ತನ್ನ ಚೇಂಬರ್ಗೆ ಕರೆದೊಯ್ದು ಕಚೇರಿಯನ್ನು ಪರಿಚಯಿಸಿದರು.
ಮಾಹಿ ಮತ್ತು ಪ್ರಿಯಾಂಕಾ ಸರ್ವೋಚ್ಚ ನ್ಯಾಯಾಲಯವನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
ಹೀಗಾಗಿ ಅವರನ್ನು ನ್ಯಾಯಾಲಯಕ್ಕೆ ಕರೆತರಲು ಸಿಜೆಐ ನಿರ್ಧರಿಸಿದ್ದರು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.