HEALTH TIPS

ಸಂಶೋಧನೆಗಳು ಪ್ರಯೋಗಾಲಯದಿಂದ ಹೊರಬರಲಿ: ಮೋದಿ

 

              ನಾಗ್ಪುರ: ವಿಜ್ಞಾನಿಗಳು, ಸಂಶೋಧಕರು ಭಾರತವನ್ನು ವಿಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ವಿಜ್ಞಾನಿಗಳು ತಮ್ಮ ಜ್ಞಾನದ ಮೂಲಕ ಜನರ ದೈನಂದಿನ ಜೀವನದಲ್ಲಿ ಬದಲಾವಣೆಗಳನ್ನು ತರಲು ಶ್ರಮಿಸಬೇಕು ಎಂದು ಸೂಚಿಸಿದರು.

            ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಐದು ದಿನಗಳ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ ಪ್ರಧಾನಿ, ವಿಜ್ಞಾನ ಕ್ಷೇತ್ರದಲ್ಲಿ ಮುಂದಿನ 25 ವರ್ಷಗಳ ಮುನ್ನೋಟದ ಕುರಿತು ವಿವರಿಸಿದರು.

                   'ಕ್ವಾಂಟಮ್‌' ತಂತ್ರಜ್ಞಾನ, ದತ್ತಾಂಶ ವಿಜ್ಞಾನ, ಹೊಸ ಲಸಿಕೆಗಳ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸುವುದು, ಹೊಸ ರೋಗಗಳ ಮೇಲೆ ಕಣ್ಗಾವಲಿಡುವುದು ಹಾಗೂ ಸಂಶೋಧನೆ ಕೈಗೊಳ್ಳಲು ಯುವ ಸಮುದಾಯವನ್ನು ಪ್ರೋತ್ಸಾಹಿಸುವುದಕ್ಕೆ ಒತ್ತು ನೀಡಬೇಕು' ಎಂದು ಪ್ರಧಾನಿ ಸೂಚಿಸಿದರು.

                  'ವಿಜ್ಞಾನ ಕ್ಷೇತ್ರದ ಸಾಧನೆಗಳು ಪ್ರಯೋಗಾಲಯದಿಂದ ಹೊರಬಂದು, ಸಮಾಜವನ್ನು ತಲುಪಬೇಕು. ಆಗ ಅದರ ಪರಿಣಾಮವು ಜಾಗತಿಕ ಮಟ್ಟದಿಂದ ತಳಮಟ್ಟದವರೆಗೂ ವ್ಯಾಪಿಸುತ್ತದೆ. ಸಂಶೋಧನೆಗಳು ಜರ್ನಲ್‌ಗಳಿಗೆ ಸೀಮಿತವಾಗದೆ, ಜನರ ದೈನಂದಿನ ಜೀವನದಲ್ಲಿ ಬದಲಾವಣೆ, ಸುಧಾರಣೆಗಳನ್ನು ತರುವಂತಾಗಬೇಕು' ಎಂದರು.

               ಯುವ ಸಮುದಾಯವನ್ನು ವಿಜ್ಞಾನದತ್ತ ಆಕರ್ಷಿಸಲು ಪ್ರತಿಭಾನ್ವೇಷಣೆ ಮತ್ತು ಹ್ಯಾಕಥಾನ್‌ಗಳನ್ನು ನಡೆಸಬೇಕು. ಈ ಮೂಲಕ ಗುರು- ಶಿಷ್ಯ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.

               ಸಂಶೋಧನಾ ಪ್ರಯೋಗಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಲು ಖಾಸಗಿ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಅವಕಾಶಗಳನ್ನು ಒದಗಿಸಬೇಕು ಎಂದು ಪ್ರಧಾನಿ ತಿಳಿಸಿದರು.

               'ಕ್ವಾಂಟಮ್‌ ಕಂಫ್ಯೂಟಿಂಗ್‌' ಕ್ಷೇತ್ರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಸಂಶೋಧಕರಿಗೆ ತಿಳಿಸಿದ ಅವರು, ಈ ಮೂಲಕ ವಿಶ್ವದ ನಾಯಕರಾಗಿ ಹೊರಹೊಮ್ಮಲು ಅವಕಾಶಗಳಿವೆ ಎಂದರು.

                 ಭಾರತವು 'ಕ್ವಾಂಟಮ್‌' ಕಂಪ್ಯೂಟರ್‌ಗಳು, ರಸಾಯನ ವಿಜ್ಞಾನ, ಸಂವಹನ, ಸೆನ್ಸಾರ್‌, 'ಕ್ರಿಪ್ಟೋಗ್ರಫಿ' ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಯುವ ಸಂಶೋಧಕರು ಮತ್ತು ವಿಜ್ಞಾನಿಗಳು 'ಕ್ವಾಂಟಮ್‌' ಕ್ಷೇತ್ರದಲ್ಲಿ ಪರಿಣತಿ ಹೊಂದುವಂತೆ ಅವರು ತಿಳಿಸಿದರು.

                     ಕೃತಕ ಬುದ್ಧಿಮತ್ತೆ, ವರ್ಚುವಲ್‌ ರಿಯಾಲಿಟಿ ಸೇರಿದಂತೆ ವಿವಿಧ ವಿಷಯಗಳನ್ನು ತಮ್ಮ ಆದ್ಯತೆ ಪಟ್ಟಿಯಲ್ಲಿ ಸೇರಿಸಿಕೊಳ್ಳೂವಂತೆ ಕರೆ ನೀಡಿದ ಪ್ರಧಾನಿ, ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳುವಂತೆ ಸೂಚಿಸಿದರು.

                ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜಿತೇಂದ್ರ ಸಿಂಗ್, ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries