ನವದೆಹಲಿ : ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರೊಂದಿಗೆ ಪ್ರಧಾನಿ ಮೋದಿ ಅವರು ಬುಧವಾರ ಮಾತುಕತೆ ನಡೆಸಿದರು.
ಈ ವೇಳೆ ಭಾರತ ಮತ್ತು ಈಜಿಪ್ಟ್, ರಕ್ಷಣೆ, ಸೈಬರ್ ಭದ್ರತೆ, ವ್ಯಾಪಾರ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ, ಯುವ ವಿಷಯಗಳು ಮತ್ತು ಪ್ರಸಾರ ಕ್ಷೇತ್ರಗಳಲ್ಲಿ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು.
ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ, ಭಯೋತ್ಪಾದನೆಯು ಮಾನವೀಯತೆಗೆ ಅತ್ಯಂತ ಗಂಭೀರವಾದ ಭದ್ರತಾ ಬೆದರಿಕೆಯಾಗಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸಲು ಕಠಿಣ ಕ್ರಮಗಳ ಅಗತ್ಯವಿದೆ ಎಂದು ಈಜಿಪ್ಟ್ ಅಧ್ಯಕ್ಷ ಒಪ್ಪಿಕೊಂಡರು ಎಂದು ಮೋದಿ ತಿಳಿಸಿದ್ದಾರೆ.
ಇದರ
ಜೊತೆಗೆ ಉಭಯ ನಾಯಕರು ಸಂಸ್ಕೃತಿ, ಐಟಿ, ಸೈಬರ್ ಭದ್ರತೆ, ಯುವ ವಿಷಯಗಳು ಮತ್ತು ಪ್ರಸಾರ
ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಐದು ಒಪ್ಪಂದಗಳಿಗೆ ಸಹಿ ಹಾಕಿದರು.
ಅದೇ
ರೀತಿ ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 12 ಶತಕೋಟಿ ಡಾಲರ್ಗೆ
ಕೊಂಡೊಯ್ಯಲು ಉಭಯ ನಾಯಕರು ನಿರ್ಧರಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ತಮ್ಮ ದೇಶದಲ್ಲಿ ಸಾಕಷ್ಟು ಹೂಡಿಕೆ ಅವಕಾಶಗಳು ಲಭ್ಯವಿರುವುದರಿಂದ ಈಜಿಪ್ಟ್ನಲ್ಲಿ ಭಾರತೀಯ ಕಂಪನಿಗಳ ಹೂಡಿಕೆಯನ್ನು ಹೆಚ್ಚಿಸಲು ಚರ್ಚೆ ನಡೆಸಲಾಯಿತು. ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಎರಡೂ ದೇಶಗಳು ಮಾತುಕತೆ ನಡೆಸಿವೆ ಎಂದರು.