ಮುಳ್ಳೇರಿಯ: ಗುಜರಾತ್ ಗಲಭೆ ಹೆಸರಿನಲ್ಲಿ ವಿದೇಶಿ ಚಾನೆಲ್ ಬಿಬಿಸಿ ಬಿಡುಗಡೆ ಮಾಡಿರುವ ವಿವಾದಾತ್ಮಕ ಸಾಕ್ಷ್ಯಚಿತ್ರ ಭಾರತದ ಏಕತೆ ಮತ್ತು ಸಮಗ್ರತೆಯನ್ನು ನಾಶಪಡಿಸುವ ಸಂಚು ಎಂದು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ, ವಕೀಲ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ.
ಎಡರಂಗ ಸರ್ಕಾರದ ಜನವಿರೋಧಿ ನೀತಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಬುಡಮೇಲುಗೊಳಿಸುವ ಷಡ್ಯಂತ್ರದ ವಿರುದ್ಧ ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ನೇತೃತ್ವದಲ್ಲಿ ಮಂಡಲಾಧ್ಯಕ್ಷ ಹರೀಶ್ ನಾರಂಪಾಡಿ ಅವರ ನಾಯಕತ್ವದಲ್ಲಿ ಬುಧವಾರ ಆರಂಭಗೊಂಡ ಪಾದಯಾತ್ರೆಯನ್ನು ಕಿನ್ನಿಂಗಾರ್‍ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತವು ವಿಶ್ವದ 4ನೇ ಅತಿದೊಡ್ಡ ಆರ್ಥಿಕ ಸ್ಥಾನಮಾನ ಹೊಂದಿದೆ. ಇಸ್ಲಾಮಿಕ್ ದೇಶಗಳು ಸೇರಿದಂತೆ ಎಲ್ಲಾ ವಿದೇಶಗಳು ಭಾರತವನ್ನು ಗುರುತಿಸುತ್ತಿವೆ. ಜಿ-20 ಶೃಂಗಸಭೆಯ ವಿವಿಧ ಸಭೆಗಳು ದೇಶದ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ರಾಷ್ಟ್ರದ ಬೆಳವಣಿಗೆಯನ್ನು ತಡೆಯುವ ಷಡ್ಯಂತ್ರಗಳನ್ನು ಮೆಟ್ಟಿ ನಾವು ಮುಂದೆಸಾಗಬೇಕಿದೆ ಎಂದವರು ತಿಳಿಸಿದರು.
ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಹೇಳಿಕೆ ನೀಡಿರುವ ಕಾಂಗ್ರೆಸ್‍ನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ, ಹಿರಿಯ ಮುಖಂಡ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್ ಕೆ.ಆ್ಯಂಟನಿ ಅವರ ಬಾಯಿ ಮುಚ್ಚಿಸಲು ಯತ್ನಿಸಲಾಗಿದೆ. ಆದರೆ ಅವರು ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿಯನ್ನು ಮನಗಂಡು ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಕೆ.ಶ್ರೀಕಾಂತ್ ಉಲ್ಲೇಖಿಸಿದರು.
ಬಿಜೆಪಿ ಬೆಳ್ಳೂರು ಪಂಚಾಯಿತಿ ಸಮಿತಿ ಅಧ್ಯಕ್ಷ ಜಯಾನಂದ ಕುಳ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷ ಎಂ.ಸುಧಾಮ ಗೋಸಾಡ, ಎಂ.ಜನನಿ, ಶಿವಕೃಷ್ಣ ಭಟ್ ಬಳಕ್ಕ, ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಬೆಳ್ಳೂರು, ಶೈಲಜಾ ಭಟ್, ಸ್ವಪ್ನಾ , ಪ್ರಮೋದ್ ಭಂಡಾರಿ, ಸುರೇಶ್ ಕುಮಾರ್, ಥೋಮಸ್, ಚಂದು ಮಾಸ್ತರ್, ಪುಷ್ಪಾ , ಮಧುಸೂದನ ಕೆಮ್ಮಂಗಯ, ಕೃಷ್ಣ ಶರ್ಮ ಮುಂತಾದವರು ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನೀಲ್ ಸ್ವಾಗತಿಸಿ, ಗೋಪಾಲಕೃಷ್ಣ ಮುಂಡೋಳುಮೂಲೆ ವಂದಿಸಿದರು.