ನವದೆಹಲಿ: 'ಚುನಾವಣಾ ಸುಧಾರಣೆಗಳನ್ನು ಕಾರ್ಯಗತಗೊಳಿಸುವ ಮುನ್ನ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಹಾಗೂ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವುದು ಅತ್ಯಗತ್ಯ' ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಬುಧವಾರ ಹೇಳಿದ್ದಾರೆ.
13ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸಮಾಲೋಚಿಸುವುದು ಹಾಗೂ ಚರ್ಚೆಗಳನ್ನು ನಡೆಸುವುದು ಶಕ್ತಿಶಾಲಿ ಪ್ರಜಾಪ್ರಭುತ್ವದ ಸಂಕೇತ' ಎಂದಿದ್ದಾರೆ.
'ವರ್ಷದ ಹಿಂದೆ ಚುನಾವಣಾ ಕಾನೂನಿನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿತ್ತು. ಇದರಿಂದಾಗಿ ಮತದಾರರ ಪಟ್ಟಿಗೆ 1.5 ಕೋಟಿಗೂ ಹೆಚ್ಚು ಮಂದಿ ಹೊಸ ಮತದಾರರ ಸೇರ್ಪಡೆ ಸಾಧ್ಯವಾಗಿತ್ತು' ಎಂದು ಹೇಳಿದ್ದಾರೆ.
ಚುನಾವಣಾ ಸುಧಾರಣೆ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, 'ಚುನಾವಣಾ ಆಯೋಗದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಆಯೋಗದ ಅಧಿಕಾರಿಗಳೊಂದಿಗೂ ಸಭೆಗಳನ್ನು ನಡೆಸಿದ್ದೇನೆ' ಎಂದಿದ್ದಾರೆ.
'ಚುನಾವಣಾ ಸುಧಾರಣೆ ಕುರಿತ ಹಲವು ಪ್ರಸ್ತಾವನೆಗಳು ಸರ್ಕಾರದ ಎದುರಿವೆ. ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುವುದರ ಜೊತೆಗೆ ನಾಗರಿಕರ ಅಭಿಪ್ರಾಯ ಆಧರಿಸಿ ಮುಂದಿನ ಹೆಜ್ಜೆ ಇಡುತ್ತೇವೆ' ಎಂದೂ ಹೇಳಿದ್ದಾರೆ.