ನವದೆಹಲಿ: ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನವೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯ ಮಾತು ಶುರುವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿಯಂತ್ರಣದಲ್ಲಿದೆ. ತೈಲ ಕಂಪನಿಗಳ ನಷ್ಟದಿಂದ ಚೇತರಿಸಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮನವಿ ಮಾಡಿದ್ದಾರೆ.
ಕೆಲವು ರಾಜ್ಯಗಳು ವ್ಯಾಟ್ ಕಡಿಮೆ ಮಾಡದಿದ್ದಕ್ಕೆ ಕಿಡಿಕಾರಿದ ಹರ್ದೀಪ್ ಸಿಂಗ್ ಪುರಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾಗುತ್ತಿದ್ದರೂ, ಕೇಂದ್ರ ಸರ್ಕಾರವು 2021ರ ನವೆಂಬರ್ ಮತ್ತು 2022ರ ಮೇನಲ್ಲಿ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಆದರೆ ಕೆಲವು ರಾಜ್ಯ ಸರ್ಕಾರಗಳು ವ್ಯಾಟ್ ಅನ್ನು ಕಡಿಮೆ ಮಾಡಲಿಲ್ಲ. ಇದರಿಂದಾಗಿ ಆ ರಾಜ್ಯಗಳಲ್ಲಿ ತೈಲ ಬೆಲೆ ಇನ್ನೂ ಹೆಚ್ಚಿದೆ ಎಂದು ಬನಾರಸ್‌ನ ಗಂಗಾ ಘಾಟ್‌ನಲ್ಲಿ ಸಿಎನ್‌ಜಿ ಬೋಟ್ ರ್ಯಾಲಿಯಲ್ಲಿ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಈ ವರ್ಷ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇವುಗಳಲ್ಲಿ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಫೆಬ್ರವರಿ 16ರಂದು ತ್ರಿಪುರಾ ಚುನಾವಣೆ ನಡೆಯಲಿದೆ. ಫೆಬ್ರವರಿ 27ರಂದು ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಮತದಾನ ನಡೆಯಲಿದೆ. ಎಲ್ಲಾ ರಾಜ್ಯಗಳ ಫಲಿತಾಂಶ ಮಾರ್ಚ್ 2ರಂದು ಪ್ರಕಟವಾಗಲಿದೆ. ಈ ವರ್ಷಾಂತ್ಯಕ್ಕೆ ಕರ್ನಾಟಕ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ರಾಜ್ಯಗಳಲ್ಲಿಯೂ ಚುನಾವಣೆ ನಡೆಯಬೇಕಿದೆ.
ಈ ಚುನಾವಣೆಗಳನ್ನು 2024ರ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದು ಪರಿಗಣಿಸಲಾಗುತ್ತಿದೆ. ಮಧ್ಯಪ್ರದೇಶ, ತ್ರಿಪುರಾ ಮತ್ತು ಕರ್ನಾಟಕದಲ್ಲಿ ಬಿಜೆಪಿ ಆಳ್ವಿಕೆ ನಡೆಸುತ್ತಿದೆ. ಆದರೆ ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರವನ್ನು ಹೊಂದಿವೆ. ಆದರೆ ಭಾರತೀಯ ಜನತಾ ಪಕ್ಷವು ಅಲ್ಲಿ ಮಿತ್ರಪಕ್ಷವಾಗಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ತೆಲಂಗಾಣದಲ್ಲಿ ಕೆಸಿಆರ್ ಅವರ ಪಕ್ಷ ಬಿಆರ್‌ಎಸ್ ಅಧಿಕಾರದಲ್ಲಿದೆ.
ಇದಲ್ಲದೇ ಸರ್ಕಾರ ಬಯಸಿದರೆ ಜಮ್ಮು-ಕಾಶ್ಮೀರದಲ್ಲೂ ಚುನಾವಣೆ ನಡೆಸಬಹುದು. ಅಲ್ಲಿಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಹೀಗಿರುವಾಗ ಇದು ಹತ್ತು ರಾಜ್ಯಗಳ ಚುನಾವಣಾ ವರ್ಷ ಎಂದೇ ಹೇಳಬಹುದು. ಚುನಾವಣೆಯಲ್ಲಿ ಡೀಸೆಲ್-ಪೆಟ್ರೋಲ್ ಬೆಲೆಗಳು ದೊಡ್ಡ ಸಮಸ್ಯೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಅವುಗಳ ಬೆಲೆಗಳನ್ನು ಕಡಿಮೆ ಮಾಡಲು ಬಯಸುತ್ತದೆ.
ಪ್ರಸ್ತುತ, ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ, ವಿನಿಮಯ ದರ, ತೆರಿಗೆಗಳು, ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆ ವೆಚ್ಚ ಮತ್ತು ಇತರ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಗದಿಪಡಿಸುತ್ತವೆ.
ತೈಲ ಬೆಲೆ ತೆರಿಗೆಯ ಪ್ರಮುಖ ಭಾಗ
ಇಂದು 100 ರೂಪಾಯಿ ಪೆಟ್ರೋಲ್ ಖರೀದಿಸಿದಾಗ 52 ರೂಪಾಯಿ ತೆರಿಗೆಯಾಗಿ ಸರ್ಕಾರದ ಜೇಬಿಗೆ
ಸೇರುತ್ತದೆ. ಇದರಿಂದ ಜನಸಾಮಾನ್ಯರ ಜೇಬು ಖಾಲಿಯಾಗಿದ್ದರೆ, ಸರ್ಕಾರದ ಬೊಕ್ಕಸವೂ
ವೇಗವಾಗಿ ಭರ್ತಿಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಬಯಸಿದರೆ ತೆರಿಗೆ
ಕಡಿತಗೊಳಿಸಿ ಜನಸಾಮಾನ್ಯರಿಗೆ ನೆಮ್ಮದಿ ನೀಡಬಹುದು. ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ
ಮುಂಚೂಣಿಯಲ್ಲಿದೆ.