ಲಖನೌ: 'ಮುಂದಿನ ವರ್ಷದ ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆಯ ನಿರ್ಮಾಣದ ಹಂತದಲ್ಲಿರುವ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗುವುದು' ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಶುಕ್ರವಾರ ಹೇಳಿದರು.
ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಮಲಲ್ಲಾ ವಿಗ್ರಹ ಸ್ಥಾಪನೆ ಬಳಿಕ ಮಂದಿರವನ್ನು ಭಕ್ತರಿಗಾಗಿ ತೆರೆಯಲಾಗುವುದು. ಮಂದಿರದ ನಿರ್ಮಾಣ ಕಾರ್ಯಕ್ಕೆ ಇಲ್ಲಿಯವರೆಗೆ ₹ 800 ಕೋಟಿ ವೆಚ್ಚ ಮಾಡಲಾಗಿದ್ದು, ಸುಮಾರು ಶೇಕಡಾ 70ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ' ಎಂದರು.
'ರಾಮ ಮಂದಿರದ ಒಟ್ಟು ನಿರ್ಮಾಣ ವೆಚ್ಚ ₹ 1,800 ಕೋಟಿ. ಮಂದಿರದಲ್ಲಿ ಒಟ್ಟು ಎರಡು ರಾಮಲಲ್ಲಾನ ವಿಗ್ರಹಗಳಿರಲಿವೆ. ಈಗಾಗಲೇ ಇರುವ ವಿಗ್ರಹವು ಚಿಕ್ಕದಾಗಿರುವುದರಿಂದ ದೂರದಿಂದ ಕಾಣಿಸುವುದಿಲ್ಲ. ಆದ್ದರಿಂದ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲು ನಾವು ಯೋಚಿಸಿದ್ದೇವೆ. ಹೊಸ ರಾಮಲಲ್ಲಾನ ವಿಗ್ರಹದ ರಚನೆ ಹಾಗೂ ವಿನ್ಯಾಸದ ಕುರಿತು ಕೆಲವು ಪ್ರಸಿದ್ಧ ಶಿಲ್ಪಿಗಳಿಂದ ಸಲಹೆ ಪಡೆಯುತ್ತಿದ್ದೇವೆ' ಎಂದು ಚಂಪತ್ ಅವರು ಹೇಳಿದರು.
'ರಾಮನವಮಿ ದಿನದಂದು ಸೂರ್ಯನ ಕಿರಣಗಳು ರಾಮನ ಮೂರ್ತಿಯ ಹಣೆಯ ಮೇಲೆ ಬೀಳುವಂತೆ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ' ಎಂದೂ ಅವರು ತಿಳಿಸಿದರು.