ನವದೆಹಲಿ: 'ಕಳೆದ 8-9 ವರ್ಷಗಳಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯ ನಿಖರತೆಯು ಶೇ 40ರಷ್ಟು ಸುಧಾರಿಸಿದೆ' ಎಂದು ಕೇಂದ್ರ ಭೂವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಭಾನುವಾರ ತಿಳಿಸಿದರು.
ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) 148ನೇ ಸಂಸ್ಥಾಪನಾ ದಿನವನ್ನು ಉದ್ದೇಶಿಸಿ ಮಾತನಾಡಿದ ಅವರು, '2025ರ ಹೊತ್ತಿಗೆ ದೇಶದ ಎಲ್ಲಾ ಭಾಗಗಳು ಡಾಪ್ಲರ್ ರೇಡಾರ್‌ಗಳ (ಹವಾಮಾನ ಮುನ್ಸೂಚನೆಯ ರೇಡಾರ್) ವ್ಯಾಪ್ತಿಗೆ ಒಳಪಡಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ದೇಶದಲ್ಲಿರುವ ಡಾಪ್ಲರ್ ರೇಡಾರ್‌ಗಳ ಸಂಖ್ಯೆಯು ಹೆಚ್ಚಾಗಿವೆ. 2013ರಲ್ಲಿ 15 ರೇಡಾರ್‌ಗಳಿದ್ದವು. 2023ರಲ್ಲಿ ಈ ಸಂಖ್ಯೆ 37ಕ್ಕೆ ತಲುಪಿದೆ. ಮುಂದಿನ 2-3 ವರ್ಷಗಳಲ್ಲಿ ಇನ್ನೂ 25 ಹೆಚ್ಚುವರಿ ರೇಡಾರ್‌ಗಳನ್ನು ಅಳವಡಿಸಲಾಗುವುದು. ಆ ಮೂಲಕ ದೇಶದಲ್ಲಿರುವ ರೇಡಾರ್‌ಗಳ ಸಂಖ್ಯೆಯನ್ನು 62ಕ್ಕೆ ಹೆಚ್ಚಿಸಲಾಗುವುದು' ಎಂದರು.
'ವಿಪತ್ತುಗಳಿಂದ ಸಂಭವಿಸುವ ಸಾವಿನ ಪ್ರಮಾಣವು ಒಂದಂಕಿಯನ್ನು ತಲುಪಿದೆ. ಇದು ನಮ್ಮ ಹವಾಮಾನ ಮುನ್ಸೂಚನೆ ನಿಖರತೆಯು ಸುಧಾರಿಸಿದರ ಪರಿಣಾಮವಾಗಿದೆ' ಎಂದು ಹೇಳಿದರು.
ಪಶ್ಚಿಮ ಹಿಮಾಲಯ ಪ್ರದೇಶದ ಹವಾಮಾನ ಮುನ್ಸೂಚನೆಯ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ಡಾಪ್ಲರ್ ರೇಡಾರ್‌ಗಳನ್ನು ಭಾನುವಾರ ಐಎಂಡಿ ಅಳವಡಿಸಿತು.