ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಹಾಗೂ ಪುತ್ತಿಗೆ ಗ್ರಾಮ ಪಂಚಾಯತಿ ಸಂಗಮಿಸುವ ದೇರಡ್ಕ- ಸೇರಾಜೆ-ಕುರೆಡ್ಕ ರಸ್ತೆ ಶೋಚನೀಯವಾಸ್ಥೆ ಪರಿಹಾರಸಬೇಕೆಂದು ಒತ್ತಾಯಿಸಿ ಪ್ರಜಾಪ್ರಭುತ್ವ ದಿನದಂದು ಹಕ್ಕೊತ್ತಾಯ ಸಂಗಮ ಸಭೆ ಜರಗಿತು.
ಸಿಪಿಐಎಂ ಮಣಿಯಂಪಾರೆ- ದೇರಡ್ಕ -ಸೇರಾಜೆ-ಬಜಕೂಡ್ಲು- ಪೂವನಡ್ಕ ಬ್ರಾಂಚ್ ಸಮಿತಿ ನೇತೃತ್ವದಲ್ಲಿ ದೇರಡ್ಕದಲ್ಲಿ ಜರಗಿದ ಹಕ್ಕೋತ್ತಾಯ ಸಂಗಮ ಸಭೆಯನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರೂ, ಸಿಪಿಐಎಂ ಕುಂಬಳೆ ಎರಿಯ ಸಮಿತಿ ಸದಸ್ಯರಾದ ಶಂಕರ ರೈ ಮಾಸ್ತರ್ ಉದ್ಘಾಟಿಸಿದರು. ಅವರು ಮಾತನಾಡಿ, ಈ ರಸ್ತೆಯ ಹೆಸರಿನಲ್ಲಿ ಸಂಸದ, ಶಾಸಕ, ಜಿಲ್ಲಾ ಪಂಚಾಯತಿ ಹಾಗೂ ಬ್ಲಾಕ್ ಪಂಚಾಯತಿ ಸದಸ್ಯರುಗಳು ನಿರ್ಲಕ್ಷ್ಯವಹಿಸುತ್ತಿರುವುದಲ್ಲದೆ ಯಾವುದೇ ಫಂಡ್ ಮಂಜೂರಾತಿಗೆ ಶ್ರಮಿಸದೆ ಹೋರಾಟದ ಹೆಸರಿನಲ್ಲಿ ಜನತೆಯ ಕಣ್ಣಿಗೆ ಮಣ್ಣೆರಚುತ್ತಿರುವುದಾಗಿ ಆರೋಪಿಸಿದರು. ನಾಡಿನ ಜನತೆ ಒಗ್ಗಟ್ಟಾಗಿ ಈ ಸಮಸ್ಯೆಯನ್ನು ಎದುರಿಸಬೇಕಾಗಿದ್ದು ಇದಕ್ಕಾಗಿ ಸಿಪಿಎಂ ಪಕ್ಷದ ನೇತೃತ್ವದಲ್ಲಿ ಪ್ರಯತ್ನಿಸಲು ಈ ಹಕ್ಕೊತ್ತಾಯ ಸಭೆ ಸಕಾಲಿಕವಾಗಿದೆ ಎಂದರು.
ಎಣ್ಮಕಜೆ ಗ್ರಾಮ ಪಂಚಾಯತಿ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಿಪಿಐಎಂ ಬಾಡೂರು ಲೋಕಲ್ ಸಮಿತಿ ಕಾರ್ಯದರ್ಶಿ ಶಿವಪ್ಪ ರೈ ಕೊರತಿಪಾರೆ, ಲೋಕಲ್ ಸಮಿತಿ ಸದಸ್ಯರುಗಳಾದ ಹನೀಫ್ ನಡುಬೈಲ್, ಸುಬ್ರಹ್ಮಣ್ಯ ಅಲ್ಚಾರ್, ವಿನೋದ್ ಪೂವನಡ್ಕ, ಸುರೇಶ್ ಕಾನ, ದಿನೇಶ್ ದೇರಡ್ಕ, ಹರೀಶ ಸೇರಾಜೆ, ಇಸ್ಮಾಯಿಲ್ ಇಡ್ಯಾಲ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.ಬಳಿಕ ದೇರಡ್ಕದಿಂದ ಹೊರಟ ಪ್ರತಿಭಟನಾ ಮೆರವಣಿಗೆಗೆ ಹಕೀಂ, ಪುಷ್ಪರಾಜ ಸಂಟನಡ್ಕ, ಪದ್ಮಾವತಿ ಮುನ್ಚಿಕಾನ, ವಾಣಿ ಗೋಳಿತ್ತಾರು, ವಿನೀತ್ ಕಾನ, ಲಕ್ಷ್ಮಿ ಗೋಳಿತ್ತಾರು, ಗಣೇಶ್ ಗೋಳಿತ್ತಾರು ಮೊದಲಾದವರು ನೇತೃತ್ವ ನೀಡಿದರು.