ಹಾವೇರಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಪ್ರಕಟಿಸಿದರು.
ಭಾನುವಾರ ಬೆಳಿಗ್ಗೆ ಇಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ಬಳಿಕ ಅವರು ಘೋಷಿಸಿದರು.
ನಮ್ಮ ಜಿಲ್ಲೆಯಲ್ಲಿ ಮುಂದಿನ ಸಮ್ಮೇಳನ ಸಂಘಟಿಸಬೇಕೆಂದು ಒಂಬತ್ತು ಜಿಲ್ಲೆಯವರು ಹಕ್ಕು ಮಂಡಿಸಿದ್ದರು. ಹೆಚ್ಚಿನವರು ಮಂಡ್ಯ ಜಿಲ್ಲೆಯಲ್ಲಿಯೇ ಮಾಡಬೇಕೆಂದು ಹೇಳಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದೊಡ್ಡ ಕಾರ್ಯಕ್ರಮ ಏರ್ಪಡಿಸಿದಾಗ ಸಣ್ಣಪುಟ್ಟ ಗೊಂದಲಗಳಾಗುವುದು ಸಹಜ. ಇಲ್ಲಿ ಏನೇನು ಕೊರತೆಗಳಾಗಿವೆಯೋ ಮುಂದಿನ ಸಮ್ಮೇಳನದಲ್ಲಿ ಪುನರಾವರ್ತನೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಶ್ನೆಗೆ ಉತ್ತರಿಸಿದರು.
ಸ್ಥಳ ಪರಿಶೀಲಿಸಿದ ನಂತರ ತಿಂಗಳೊಳಗೆ ಸಮ್ಮೇಳನ ಎಲ್ಲಿ ಸಂಘಟಿಸಬೇಕು ಎನ್ನುವುದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಶನಿವಾರ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹೇಶ ಜೋಶಿ ಹೇಳಿದಾಗ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಸಭೆಯಲ್ಲಿ ಜಗಳ ಉಂಟಾಗಿ ಮುಂದೂಡಲಾಗಿತ್ತು. ಪರಿಷತ್ತಿನ ಸದಸ್ಯರಿಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.