ಕಾಸರಗೋಡು: ಪ್ರತಿಯೊಬ್ಬ ಸಾಹಿತಿಯೂ ಮತ್ತೊಬ್ಬ ಸಾಹಿತಿಯ ಹೆಗಲ ಮೇಲೆ ಕುಳಿತಿರುತ್ತಾನೆ. ಹಿಂದಿನ ಕಾಲದ ಕವಿಗಿಂತ ಈಗಿನ ಕಾಲದ ಕವಿಗೆ ಅನುಭವದಲ್ಲಿ ಹೆಚ್ಚಿನವನಾಗಿರುತ್ತಾನೆ. ಪರಂಪರೆಯ ತಿಳಿವು ಹೊಸ ಕಾಲದ ಅನುಭವ ಆಧುನಿಕ ಕವಿಯನ್ನು ಮತ್ತಷ್ಟು ವಿವೇಕಿಯನ್ನಾಗಿಸುತ್ತದೆ. ಇಂಥಾ ಆಧುನಿಕ ಕಾಲದ ಕವಿಗಳಿಗೆ ಕುವೆಂಪು ಗುರುವಾಗಿ ನಿಲ್ಲುತ್ತಾರೆ ಎಂದು ಕಾಸರಗೋಡಿನ ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ರಾಧಾಕೃಷ್ಣ ಎನ್ ಬೆಳ್ಳೂರು ಹೇಳಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ‘ಕುವೆಂಪು ಚಿಂತನ ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕುವೆಂಪು ಅವರ ಕೃತಿಗಳಲ್ಲಿ ಮಾನವತಾವಾದವನ್ನು ಬೋಧಿಸುವ ಗುಣಗಳು ಅಡಕವಾಗಿದೆ ಕುವೆಂಪು ಹೇಳಿದ ಪಂಚ ಮಂತ್ರ, ಸಪ್ತಸೂತ್ರ, ಅನಿಕೇತನ ತತ್ತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವೂ ವಿಶ್ವಮಾನವತ್ವವನ್ನು ಪಡೆಯಬಹುದು. ಸ್ವವಿವೇಕ, ಸ್ವಂತ ಆಲೋಚನೆಗಳನ್ನು ಬೆಳೆಸಿಕೊಂಡು ನಿರಂಕುಶ ಮತಿಗಳಾಗಬೇಕು, ಕುವೆಂಪು ಹೇಳಿದಂತೆ ಹುಟ್ಟುತ್ತಾ ವಿಶ್ವಮಾನವರಾದ ನಾವು ಇತರ ನಿಯಂತ್ರಣಗಳಿಗೆ ಒಳಗಾಗಿ ಅಲ್ಪಮಾನವ, ಅಲ್ಪಮತಿಗಳಾಗಿ ಹೆಣಗುತ್ತಿದ್ದೇವೆ ಎಂದರು.
ವಿಭಾಗದ ಅಧ್ಯಕ್ಷ ಡಾ. ಸೌಮ್ಯ ಹೆಚ್ ಮಾತನಾಡಿ ಕುವೆಂಪು ಅವರ ಚಿಂತನೆಗಳು ಅನಂತ ಕಾಲದವರೆಗೂ ಪ್ರಸ್ತುತವಾಗಿದ್ದು ನಾವೆಲ್ಲರೂ ವಿಶ್ವಮಾನವತಾವಾದದ ಕಡೆಗೆ ಚಲಿಸಬೇಕು, ನಮ್ಮನ್ನು ನಿಯಂತ್ರಿಸುವ ಶಕ್ತಿಗಳನ್ನು ಗುರ್ತಿಸುವ ಮತ್ತು ಅವುಗಳೊಟ್ಟಿಗೆ ವಿವೇಕದಿಂದ ವರ್ತಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಂಯೋಜಕರಾದ ಗೋವಿಂದರಾಜು ಕೆ.ಎಂ,, ಸಹಾಯಕ ಪ್ರಾಧ್ಯಾಕರುಗಳಾದ ಡಾ. ಪ್ರವೀಣ ಪಿ, ಚೇತನ್ ಎಂ, ಬಬಿತಾ ಬಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.