ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ ನಡೆಸುತ್ತಿದೆ. ಅದರ ಭಾಗವಾಗಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲು ಮುಂದಾಗಿದ್ದು ಇದರ ಮಧ್ಯೆ ಸಚಿವ ಸಂಪುಟ ಪುನಾರಚಣೆ ಚರ್ಚೆ ತೀವ್ರಗೊಂಡಿದೆ.
ಈ ತಿಂಗಳು ಕೇಂದ್ರ ಸಚಿವ ಸಂಪುಟ ಪುನಾರಚನೆಯ ನಿರೀಕ್ಷೆಯು ಸಚಿವರ ಕಾರ್ಯವೈಖರಿ ಮತ್ತು ಆಡಳಿತ ಪಕ್ಷದ ರಾಜಕೀಯ ಅನಿವಾರ್ಯತೆಗಳಲ್ಲಿ ಬದಲಾವಣೆಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಎರಡನೇ ಅವಧಿಯ ಜುಲೈ 2021ರಲ್ಲಿ ಒಮ್ಮೆ ಮಾತ್ರ ತಮ್ಮ ತಂಡವನ್ನು ಪುನರ್ರಚಿಸಿದ್ದರು. ಆದರೆ ಅವರ ಮೊದಲ ಅವಧಿಯಲ್ಲಿ ಮೂರು ಬಾರಿ ತಮ್ಮ ಸಂಪುಟವನ್ನು ಪುನರ್ರಚಿಸಿ ಮತ್ತು ವಿಸ್ತರಿಸಿದ್ದರು.
ಜನವರಿ 16-17ರಂದು ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇನ್ನು ಜನವರಿ 31ರಂದು ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಈ ತಿಂಗಳ ಯಾವುದೇ ಸಮಯದಲ್ಲಿ ಸಂಪುಟ ಪುನಾರಚರಣೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಮೋಘ ಗೆಲುವು ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಮತ್ತು ದೆಹಲಿ ಮುನ್ಸಿಪಲ್ ಚುನಾವಣೆಗಳಲ್ಲಿನ ಸೋಲಿನಿಂದ ಕಲಿತ ಪಾಠಗಳು ತಮ್ಮ ರಾಜಕೀಯ ಅಗತ್ಯಗಳನ್ನು ಹೊರತುಪಡಿಸಿ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆ ಸಂಪುಟ ಬದಲಾವಣೆಗೆ ಕಾರಣವಾಗುತ್ತವೆ ಎಂಬ ಅಭಿಪ್ರಾಯವಿದೆ.
'360-ಡಿಗ್ರಿ ದೃಷ್ಟಿಕೋನ'ದ ಪ್ರಕಾರ ಪಕ್ಷವು ಕೈಗೊಂಡ ಎಲ್ಲಾ ಪ್ರಮುಖ ಕಸರತ್ತುಗಳ ಬಗ್ಗೆ ಆಗಾಗ್ಗೆ ಚರ್ಚಿಸಲಾಗುತ್ತದೆ. ಲೋಕಸಭೆ ಚುನಾವಣೆಗೆ ಈಗ ಕೇವಲ 15 ತಿಂಗಳುಗಳಿರುವ ಕಾರಣ ಪುನರ್ರಚನೆಯು ಕೊನೆಯದಾಗಿರಬಹುದು. ಬಿಹಾರದಂತಹ ದೊಡ್ಡ ರಾಜ್ಯಗಳಲ್ಲಿ ರಾಜಕೀಯ ಸಮೀಕರಣಗಳು, ಉತ್ತರದ ರಾಜ್ಯಗಳು, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಕೂಡ ಬದಲಾವಣೆಗಳಲ್ಲಿ ಪಾತ್ರವನ್ನು ವಹಿಸುತ್ತದೆ. ಅದೇ ರೀತಿ ಪಕ್ಷದ ಸಂಘಟನೆಯಲ್ಲೂ ಬದಲಾವಣೆ ತರಬಹುದು ಎಂದು ಚರ್ಚಿಸಲಾಗಿದೆ. ಮೋದಿಯವರ ಸಚಿವ ಸಂಪುಟ ಬದಲಾವಣೆಗಳು ಯಾವಾಗಲೂ ಅಚ್ಚರಿಯಿಂದ ಕೂಡಿರುತ್ತದೆ.
ಕಳೆದ ಬಾರಿ ಪ್ರಕಾಶ್ ಜಾವಡೇಕರ್ ಮತ್ತು ರವಿಶಂಕರ್ ಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಇದೇ ವೇಳೆ ಮಾಜಿ ಐಎಎಸ್ ಅಧಿಕಾರಿ ಅಶ್ವಿನಿ ವೈಷ್ಣವ್ ಅವರನ್ನು ಸೇರಿಸಿಕೊಂಡು ಅವರಿಗೆ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನದಂತಹ ಪ್ರಮುಖ ಸಚಿವಾಲಯಗಳನ್ನು ನೀಡಲಾಯಿತು. ಕಳೆದ ಪುನಾರಚನೆಯ ನಂತರ, ಮುಕ್ತಾರ್ ಅಬ್ಬಾಸ್ ನಖ್ವಿ ನಿರ್ಗಮನ, ಮಿತ್ರಪಕ್ಷಗಳಾದ ಜನತಾ ದಳ (ಯುನೈಟೆಡ್) ಮತ್ತು ಶಿವಸೇನೆ ಮೈತ್ರಿಯಿಂದ ಹೊರಬಂದ ನಂತರ ಹಲವು ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಮುಂದಿನ ಪುನರ್ ರಚನೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ಪ್ರಾತಿನಿಧ್ಯ ಸಿಗುವ ಸಾಧ್ಯತೆ ಇದ್ದು, ಶಿವಸೇನೆಯ ಬಹುಪಾಲು ಸಂಸದರ ಬೆಂಬಲವಿದೆ.
ಇದೇ ವೇಳೆ ಬಿಹಾರದ ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟಿರುವ ಚಿರಾಗ್ ಪಾಸ್ವಾನ್ ಅವರಿಗೆ ಬಿಜೆಪಿ ಬಹುಮಾನ ನೀಡಬಹುದು ಎಂಬ ಅಭಿಪ್ರಾಯವೂ ಇದೆ. ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಸ್ ಅವರು ಪ್ರಸ್ತುತ ಕೇಂದ್ರ ಸಚಿವರಾಗಿದ್ದು ಮಾತೃಪಕ್ಷದ ಆರು ಸಂಸದರ ಪೈಕಿ ಐವರ ಬೆಂಬಲದೊಂದಿಗೆ ಪ್ರತ್ಯೇಕ ತಂಡವನ್ನು ರಚಿಸಿದ್ದಾರೆ.