ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷರ ಮೇಲಿನ ಆರೋಪಗಳ ತನಿಖೆಗೆ ಮೇಲುಸ್ತುವಾರಿ ಸಮಿತಿ ನೇಮಿಸುವ ಮನ್ನ ಕ್ರೀಡಾ ಸಚಿವಾಲಯವು ತಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಕುಸ್ತಿಪಟುಗಳು ಅಸಮಾಧಾನ ಹೊರಹಾಕಿದ್ದಾರೆ.
ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಮೇಲಿನ ಆರೋಪಗಳ ತನಿಖೆಗೆ ಕ್ರೀಡಾ ಸಚಿವಾಲಯವು ಮಹಿಳಾ ಬಾಕ್ಸರ್ ಎಂ.ಸಿ.ಮೇರಿ ಕೋಮ್ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ಸೋಮವಾರ ನೇಮಕ ಮಾಡಿತ್ತು.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶಾ ಪೋಗಟ್, ಸರಿತಾ ಮೋರ್ ಮತ್ತು ಸಾಕ್ಷಿ ಮಲಿಕ್ ಅವರು ಕ್ರೀಡಾ ಸಚಿವಾಲಯದ ನಡೆಯನ್ನು ಪ್ರಶ್ನಿಸಿ 'ಟ್ವೀಟ್' ಮಾಡಿದ್ದಾರೆ.
'ನಮ್ಮೊಂದಿಗೆ ಸಮಾಲೋಚನೆ ನಡೆಸಿಯೇ ಮೇಲುಸ್ತುವಾರಿ ಸಮಿತಿ ರಚಿಸಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಆದರೆ ಯಾರೂ ನಮ್ಮ ಅಭಿಪ್ರಾಯ ಕೇಳದಿರುವುದು ಬೇಸರದ ಸಂಗತಿ' ಎಂದು ದೂರಿದ್ದಾರೆ. ತಾವು ಮಾಡಿರುವ ಟ್ವೀಟ್‌ಅನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.
ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡಲು ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಕುಸ್ತಿಪಟು ಗೀತಾ ಪೋಗಟ್ ಮನವಿ ಮಾಡಿದ್ದಾರೆ.
'ಗೌರವಾನ್ವಿತ ಪ್ರಧಾನಿಯವರೇ, ಈ ದೇಶದ ಎಲ್ಲಾ ಹೆಣ್ಣುಮಕ್ಕಳು ಹೆಚ್ಚಿನ ಭರವಸೆ ಮತ್ತು ನಿರೀಕ್ಷೆಗಳೊಂದಿಗೆ ನಿಮ್ಮತ್ತ ನೋಡುತ್ತಿದ್ದಾರೆ. ನಮಗೆ ನ್ಯಾಯ ಸಿಗದಿದ್ದರೆ, ಅದು ದೇಶದ ಇತಿಹಾಸದಲ್ಲಿ ದೊಡ್ಡ ದುರದೃಷ್ಟ ಎನಿಸಿಕೊಳ್ಳಲಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಮೇರಿ ಕೋಮ್ ನೇತೃತ್ವದ ಮೇಲುಸ್ತುವಾರಿ ಸಮಿತಿಯಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಮಿಷನ್ ಒಲಿಂಪಿಕ್ ಸೆಲ್ ಸದಸ್ಯರಾದ ತೃಪ್ತಿ ಮುರ್ಗುಂಡೆ, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ಮಾಜಿ ಸಿಇಒ ರಾಜಗೋಪಾಲನ್ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಧಿಕಾ ಶ್ರೀಮನ್ ಅವರು ಇದ್ದಾರೆ.