ಚೆನ್ನೈ: ಸೇತುಸಮುದ್ರಂ ಕಾಲುವೆ ಯೋಜನೆಯನ್ನು ಯಾವುದೇ ವಿಳಂಬ ಮಾಡದೆ ತಕ್ಷಣವೇ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಂಡಿಸಿದ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಗುರುವಾರ ಸರ್ವಾನುಮತದಿಂದ ಅಂಗೀಕರಿಸಿದೆ.
ಸೇತುಸಮುದ್ರಂ ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಸಿಎಂ ಸ್ಟಾಲಿನ್ ಅವರು ತಿಳಿಸಿದ್ದಾರೆ.
ಅನಿರೀಕ್ಷಿತ ಬೆಳೆವಣಿಯಲ್ಲಿ, ಬಿಜೆಪಿಯ ಸದನ ನಾಯಕ ನೈನಾರ್ ನಾಗೇಂದ್ರನ್ ಅವರು, ಭಗವಾನ್ ಶ್ರೀರಾಮ ನಿರ್ಮಿಸಿದ್ದಾನೆ ಎಂದು ನಂಬಲಾದ ರಾಮಸೇತುವಿಗೆ ಯಾವುದೇ ಹಾನಿಯಾಗದಂತೆ ಯೋಜನೆಯನ್ನು ಜಾರಿಗೊಳಿಸಿದರೆ ಬೆಂಬಲಿಸುವುದಾಗಿ ಹೇಳಿದರು.
ಎಐಎಡಿಎಂಕೆ ಶಾಸಕ ಪೊಳ್ಳಾಚಿ ವಿ ಜಯರಾಮನ್ ಮಾತನಾಡಿ, ಈ ಯೋಜನೆಯ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಬೇಕು ಮತ್ತು ಜನರಿಗೆ ಉಪಯುಕ್ತವಾದರೆ ಅದನ್ನು ಕಾರ್ಯಗತಗೊಳಿಸಬಬೇಕು ಎಂದರು.
ವಿರೋಧ ಪಕ್ಷದ ಉಪನಾಯಕ ಓ ಪನ್ನೀರಸೆಲ್ವಂ ಅವರು ಸಹ ಈ ನಿರ್ಣಯವನ್ನು ಬೆಂಬಲಿಸಿದರು. ಈಗಾಗಲೇ ವರದಿಯಾಗಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸುವ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪಿಎಂಕೆ ಮತ್ತು ಡಿಎಂಕೆಯ ಮಿತ್ರಪಕ್ಷಗಳಾದ ಕಾಂಗ್ರೆಸ್, ವಿಸಿಕೆ, ಸಿಪಿಎಂ, ಸಿಪಿಐ, ಎಂಡಿಎಂಕೆ, ಕೆಡಿಎಂಕೆ, ಎಂಎಂಕೆ ಮತ್ತು ಟಿವಿಕೆ ನಿರ್ಣಯವನ್ನು ಬೆಂಬಲಿಸಿದವು.
ನಿರ್ಣಯ ಮಂಡಿಸಿ ಮಾತನಾಡಿದ ಸ್ಟಾಲಿನ್ ಅವರು, ತಮಿಳುನಾಡು ಮತ್ತು ಭಾರತದ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸಲು ಸೇತುಸಮುದ್ರಂ ಯೋಜನೆ ಅತ್ಯಗತ್ಯ ಎಂದು ಹೇಳಿದರು.