ನವದೆಹಲಿ: ಹವಾಮಾನ ಬದಲಾವಣೆ ಪರಿಣಾಮ ನಿಭಾಯಿಸಲು ಭಾರತ ಬದ್ಧವಾಗಿದೆ ಮತ್ತು ಅಗತ್ಯ ತಾಂತ್ರಿಕ ನೆರವಿನ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಗುರುವಾರ ಹೇಳಿದ್ದಾರೆ.
ಎರಡು ದಿನಗಳ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈಗಾಗಲೇ ಹವಾಮಾನ ಸಂಪನ್ಮೂಲಗಳಲ್ಲಿ ತನ್ನ ಪಾಲು ಬಳಸಿವೆ ಮತ್ತು ಅವರು ಹಿಂದಿನ ಕ್ರಮಗಳ ಜವಾಬ್ದಾರಿ ಸ್ವೀಕರಿಸುವ ಸಮಯ ಬಂದಿದೆ ಎಂದು ಹೇಳಿದರು.
ಒಂದು ದೇಶದ ಅಭಿವೃದ್ಧಿ ಮತ್ತು ಅದರ ಜೀವವೈವಿಧ್ಯ ಹಾಗೂ ಪರಿಸರ ವ್ಯವಸ್ಥೆಗಳ ಸಂರಕ್ಷಣೆ ಎರಡು ಪ್ರಮುಖ ಅಂಶಗಳಾಗಿವೆ. ಇವೆರಡನ್ನೂ ನಿರ್ಲಕ್ಷಿಸಲಾಗುವುದಿಲ್ಲ. ಆದ್ದರಿಂದ ಅಸಮಾನತೆ ಕಡಿಮೆ ಮಾಡಲು ಮತ್ತು ಜನರ ಜೀವನದ ಗುಣಮಟ್ಟದ ಸಬಲೀಕರಣ ಹಾಗೂ ಸುಧಾರಣೆ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಅಭಿವೃದ್ಧಿಶೀಲ ರಾಷ್ಟ್ರಗಳ ದುರ್ಬಲತೆಯನ್ನು ಭಾರತ ಅರ್ಥ ಮಾಡಿಕೊಂಡಿದೆ ಎಂದು ಪ್ರತಿಪಾದಿಸಿದ ಯಾದವ್, ತುರ್ತು ಜಾಗತಿಕ ಹವಾಮಾನ ಕ್ರಮವು ನಿಜವಾಗಿಯೂ ಸಮಯದ ಅಗತ್ಯವಾಗಿದೆ ಎಂದು ಹೇಳಿದರು.