ಮುಂಬೈ : 'ಸಕಲ ಹಿಂದೂ ಸಮಾಜ' ಬ್ಯಾನರ್ ಅಡಿಯಲ್ಲಿ ಬಲಪಂಥೀಯ ಪಕ್ಷಗಳು 'ಲವ್ ಜಿಹಾದ್' ಮತ್ತು 'ಲ್ಯಾಂಡ್ ಜಿಹಾದ್' ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು. ಈ ಮೂಲಕ ಪ್ರಬಲ ಮತಾಂತರ-ವಿರೋಧಿ ಕಾನೂನು ಜಾರಿಗೆ ತರಬೇಕು ಮತ್ತು ಧರ್ಮದ ಹೆಸರಿನಲ್ಲಿ ಭೂಮಿಯನ್ನು ಕಿತ್ತುಕೊಳ್ಳುವುದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದವು.
ದಾದರ್‌ನ ಶಿವಾಜಿ ಪಾರ್ಕ್‌ನಿಂದ ಪ್ರಭಾದೇವಿ ಪ್ರದೇಶದ ಕಾಮಗಾರ್ ಮೈದಾನದವರೆಗೆ ನಡೆದ ಹಿಂದೂ ಜನ ಆಕ್ರೋಶ ಮೋರ್ಚಾ ರ‍್ಯಾಲಿಯಲ್ಲಿ ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್ ನೇತೃತ್ವದಲ್ಲಿ ಬಿಜೆಪಿಯ ನಾಯಕರು ಮತ್ತು ಶಿವಸೇನಾದ (ಬಾಳಾಸಾಹೇಬ್ ಬಣ) ಸದಸ್ಯರು ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್), ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕರ್ತರು ಭಾಗಿಯಾಗಿದ್ದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶೇಲಾರ್, ಹಿಂದೂ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು ನಮ್ಮ ಸಮಸ್ಯೆಗಳೇ ಆಗಿವೆ. 'ಲವ್ ಜಿಹಾದ್' ಮತ್ತು 'ಲ್ಯಾಂಡ್ ಜಿಹಾದ್' ವಿರುದ್ಧ ಪ್ರತಿಭಟನೆ ನಡೆಸಿ ನಮ್ಮ ಕಳವಳ ವ್ಯಕ್ತಪಡಿಸಿದ್ದೇವೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಳೆದ ಕೆಲವು ತಿಂಗಳುಗಳಿಂದ 10ಕ್ಕೂ ಹೆಚ್ಚು ರ‍್ಯಾಲಿಗಳು ರಾಜ್ಯದ ವಿವಿಧ ನಗರಗಳಲ್ಲಿ ನಡೆದಿದ್ದವು. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ರ‍್ಯಾಲಿಯನ್ನು ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿತ್ತು.
3 ರಿಂದ 4 ಕಿ.ಮೀ. ಉದ್ದದಷ್ಟು ಇದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು.