ಸಿಕಂದರಾಬಾದ್: ವಂದೇ ಭಾರತ್ ರೈಲುಗಳ ವಿನ್ಯಾಸ ವಿಮಾನಕ್ಕಿಂತಲೂ ಉತ್ತಮವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದು ವಂದೇ ಭಾರತ್ ರೈಲು ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ಆಗಿ ಭಾಗವಹಿಸಿ ಭಾನುವಾರದಂದು ಸಿಕಂದರಾಬಾದ್-ವಿಶಾಖಪಟ್ಟಣಂ ಮಾರ್ಗದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಉದ್ಘಾಟಿಸಿದರು, ಭಾರತೀಯ ರೈಲ್ವೆಯಿಂದ ಉದ್ಘಾಟನೆಯಾಗುತ್ತಿರುವ 8 ನೇ ವಂದೇ ಭಾರತ್ ರೈಲು ಇದಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಶ್ವಿನಿ ವೈಷ್ಣವ್, ವಂದೇ ಭಾರತ್ ರೈಲು ಅತ್ಯುತ್ತಮ ರೈಲಾಗಿದ್ದು, 52 ಸೆಕೆಂಡ್ ನಲ್ಲಿ 0-100 ಕಿ.ಮೀ ವರೆಗೂ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಜಗತ್ತಿನಲ್ಲಿ ಬೇರೆ ರೈಲುಗಳು ಇದೇ ವೇಗ ಪಡೆದುಕೊಳ್ಳುವುದಕ್ಕೆ 54-60 ಸೆಕೆಂಡ್ ಗಳ ಸಮಯ ತೆಗೆದುಕೊಳ್ಳಲಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ವಿನ್ಯಾಸ ವಿಮಾನಕ್ಕಿಂತಲೂ ಉತ್ತಮವಾಗಿದೆ. ಅತ್ಯುತ್ತಮ ಪ್ರಯಾಣದ ಅನುಭವ ನೀಡಲಿದೆ ಭಾರತದ ರೈಲ್ವೆ ಹಾಗೂ ದೇಶದ ಅಭಿವೃದ್ಧಿ ರಾಜಕೀಯವನ್ನೂ ಮೀರಿದ್ದಾಗಿದೆ, ಪ್ರಧಾನಿ ಮೋದಿ ತೆಲಂಗಾಣಕ್ಕೆ 3,500 ಕೋಟಿ ರೂಪಾಯಿ ನೀಡುತ್ತಿದ್ದಾರೆ. ಈ ಅವಕಾಶವನ್ನು ನಾವು ಉಪಯೋಗಿಸಿಕೊಂಡು ತೆಲಂಗಾಣದಲ್ಲಿ ಅತ್ಯುತ್ತಮ ರೀತಿಯಲ್ಲಿ ರೈಲ್ವೆಯನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ವೈಷ್ಣವ್ ಹೇಳಿದ್ದಾರೆ.