ಕೊಚ್ಚಿ: ಗಂಡನನ್ನು ಬೆದರಿಸುವ ಸಲುವಾಗಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿಯ ಸ್ಥಿತಿ ಇದೀಗ ಗಂಭೀರವಾಗಿದ್ದು, ಸತ್ತು ಹೋಗಿರುವ ಮಗುವನ್ನು ಹೊರ ತೆಗೆಯಲು ಮೂರು ದಿನಗಳಿಂದ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪರಸ್ಸಾಲಾದ ವೈದ್ಯಕೀಯ ಕಾಲೇಜು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಅರುಣಿಮಾ (27), ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಕೆ. ಈಕೆಯ ಗಂಡ ಅಜಯ್ ಪ್ರಕಾಶ್ ಓರ್ವ ಯೋಧ. ಘಟನೆ ನಡೆಯುವ ಸಮಯದಲ್ಲಿ ಅಜಯ್ ಮನೆಯಲ್ಲೇ ಇದ್ದ. ಸೇನೆಯಿಂದ ರಜೆಯ ಮೇಲೆ ಊರಿಗೆ ಬಂದಿದ್ದಾಗಲೇ ಅರುಣಿಮಾ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅರುಣಿಮಾಳನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗ್ಯಾಸ್ ಸ್ಫೋಟದಿಂದ ಘಟನೆ ಸಂಭವಿಸಿದೆ ಎಂದು ಆರಂಭದಲ್ಲಿ ಅಜಯ್ ಆಸ್ಪತ್ರೆಗೆ ಹೇಳಿಕೆ ನೀಡಿದ್ದ.
ಅರುಣಿಮಾ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಘಟನೆಯ ಬೆನ್ನಲ್ಲೇ ಪಾರಸ್ಸಾಲಾದಲ್ಲಿರುವ ಅಜಯ್ ಮನೆಯನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಮ್ಯಾಜಿಸ್ಟ್ರೇಟ್ ಸೇರಿದಂತೆ ಹಲವರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪತಿಗೆ ಬೆದರಿಕೆ ಹಾಕಲು ಈ ಕೃತ್ಯ ಎಸಗಿದ್ದಾಳೆ ಎಂದು ಆಕೆಯ ತಂದೆ ತಿಳಿಸಿದ್ದಾರೆ.