ಚೆನ್ನೈ: ಆರ್ಥಿಕವಾಗಿ ದುರ್ಬಲ ವರ್ಗಕ್ಕೆ(ಇಡಬ್ಲ್ಯುಎಸ್) ಸೇರಿದವರಿಗೆ ನೀಡುವ ಶೇ 10ರಷ್ಟು ಮೀಸಲಾತಿ ನೀತಿಯು ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದೆ. ಆದ್ದರಿಂದ ತಮಿಳುನಾಡಿನಲ್ಲಿ ಅದನ್ನು ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ಸೋಮವಾರ ತಿಳಿಸಿದೆ.
ಸದ್ಯ ಜಾರಿಯಲ್ಲಿರುವ ಮೀಸಲಾತಿ ನೀತಿಯನ್ನೇ (ಶೇ 69) ರಾಜ್ಯದಲ್ಲಿ ಮುಂದುವರಿಸುವುದಾಗಿ ಸರ್ಕಾರ ಸೂಚ್ಯವಾಗಿ ಹೇಳಿದೆ.
'ರಾಜ್ಯದಲ್ಲಿ ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವ ಮತ್ತು ಹಿಂದುಳಿದ ವರ್ಗಗಳನ್ನು ಮುನ್ನೆಲೆಗೆ ತರುವ ಸಲುವಾಗಿ ತಮಿಳುನಾಡು ಸರ್ಕಾರ ವಿಶಿಷ್ಟವಾದ ಮೀಸಲಾತಿ ವ್ಯವಸ್ಥೆಯನ್ನು ಆಂಗೀಕರಿಸಿದೆ. ಅದನ್ನೇ ಮುಂದುವರೆಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ' ಎಂದು ತಮಿಳುನಾಡು ವಿಧಾನಸಭೆಗೆ ನೀಡಲಾದ ರಾಜ್ಯದ ರಾಜ್ಯಪಾಲರ ಭಾಷಣದಲ್ಲಿ ಹೇಳಲಾಗಿದೆ.
ತಮಿಳುನಾಡು ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿ ಸಹಯೋಗ ಮತ್ತು ತಮಿಳುನಾಡು ಅಲ್ಪಸಂಖ್ಯಾತರ ಆರ್ಥಿಕ ಅಭಿವೃದ್ಧಿ ಸಹಯೋಗದಿಂದ ₹210 ಕೋಟಿ ಮೊತ್ತದ ಸಾಲವನ್ನು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.