ತಿರುವನಂತಪುರ: ಹುಲಿಗಳೂ ಸೇರಿದಂತೆ ಹಲವು ವನ್ಯಜೀವಿಗಳ ಸಂತತಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇರಳ ಸರ್ಕಾರದ ನಡೆಗೆ ಪರಿಸರವಾದಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ವನ್ಯಜೀವಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ, ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದ ಘಟನೆಗಳನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ವಯನಾಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಾದ ಮೇಲೊಂದು ಹುಲಿ ದಾಳಿ ಘಟನೆಗಳು ವರದಿಯಾಗಿವೆ. ಹುಲಿ ಸಂತತಿಯನ್ನು ನಿಯಂತ್ರಿಸುವ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಿದ್ದೇವೆ ಎಂದು ರಾಜ್ಯದ ಅರಣ್ಯ ಎ.ಕೆ. ಶಶಿಧರನ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ, ವಯನಾಡ್ ಅಥವಾ ಇತರೆ ಅರಣ್ಯದಲ್ಲಿ ಹುಲಿಗಳು ಅಥವಾ ಇತರೆ ವನ್ಯಜೀವಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿರುವ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ ಎಂದು ಪರಿಸರವಾದಿಗಳು ಹೇಳಿದ್ದಾರೆ.
ಹುಲಿ ಸಂರಕ್ಷಣೆ ಬಗ್ಗೆ ನಡೆಸಿದ್ದ ವ್ಯಾಪಕ ಅಭಿಯಾನದಿಂದಾಗಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 2006ರಲ್ಲಿ 46 ಹುಲಿಗಳು ರಾಜ್ಯದಲ್ಲಿದ್ದವು. 2018ರಲ್ಲಿ ಇವುಗಳ ಸಂಖ್ಯೆ 190ಕ್ಕೆ ಏರಿಕೆಯಾಗಿದೆ. 344 ಚದರ ಕಿಲೋಮೀಟರ್ ವ್ಯಾಪ್ತಿಯ ವಯನಾಡ್ ಅಭಯಾರಣ್ಯದಲ್ಲಿ 120 ಹುಲಿಗಳಿವೆ.
ರಾಜ್ಯದ ಅರಣ್ಯಾಧಿಕಾರಿಗಳ ಪ್ರಕಾರ, ವಯನಾಡ್‌ನಲ್ಲಿ ಹುಲಿಗಳ ಸಂತತಿ ವ್ಯಾಪಕವಾಗಿ ಹೆಚ್ಚಳ ಆಗಿಲ್ಲದಿದ್ದರೂ, ಸ್ಥಳಾಂತರ ಅಥವಾ ಕೊಲ್ಲುವ ಮೂಲಕ ಅವುಗಳ ಸಂಖ್ಯೆ ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಹುಲಿಗಳ ಸಂಖ್ಯೆ ನಿಯಂತ್ರಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಸೋಮವಾರ ಅರಣ್ಯಾಧಿಕಾರಿಗಳ ಸಭೆ ನಡೆಸಲಾಗಿದೆ.
ನೈಜ ಕಾರಣಗಳನ್ನು ಮುಚ್ಚಿಹಾಕಲು, ಮಾನವ-ಪ್ರಾಣಿ ಸಂಘರ್ಷವನ್ನು ಮುಂದಿಟ್ಟುಕೊಂಡು ಹುಲಿ ಸಂತತಿ ನಿಯಂತ್ರಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಪರಿಸರವಾದಿಗಳಾದ ಎಂ.ಎನ್. ಜಯಚಂದ್ರನ್ ಹಾಗೂ ಎನ್.ಬಾದುಶಾ ಅವರು ಆರೋಪಿಸಿದ್ದಾರೆ.
'ವಯನಾಡ್ ಅಭಯಾರಣ್ಯವು ಬಂಡೀಪುರ, ಮಧುಮಲೈ, ನಾಗರಹೊಳೆ, ಕಾವೇರಿ ಅಭಯಾರಣ್ಯಗಳು ಹಾಗೂ ಹುಲಿ ಸಂರಕ್ಷಿತ ಅರಣ್ಯಗಳನ್ನು ಸಂಪರ್ಕಿಸುತ್ತದೆ. ಹುಲಿಗಳು ಹಾಗೂ ಇತರೆ ವನ್ಯಜೀವಿಗಳು ಈ ಎಲ್ಲ ಪ್ರದೇಶಗಳಲ್ಲಿ ಸುತ್ತಾಡುತ್ತವೆ. ಹೀಗಿರುವಾಗ, ವಯನಾಡ್ ಅಭಯಾರಣ್ಯವು ಹುಲಿಗಳಿಂದ ತುಂಬಿಹೋಗಿದೆ ಎಂದು ವಾದಿಸುವುದು ಅತಾರ್ಕಿಕ. ಕೇರಳದಲ್ಲಿ ಹುಲಿಗಳ ಸಂತತಿಯನ್ನು ನಿಯಂತ್ರಿಸುವ ಕ್ರಮಗಳನ್ನು ಜಾರಿಗೊಳಿಸುವುದರ ವಿರುದ್ಧ ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ' ಎಂದು ವಯನಾಡ್ ಪ್ರಕೃತಿ ಸಂರಕ್ಷಣ ಸಮಿತಿಯ ಅಧ್ಯಕ್ಷ ಬಾದುಶಾ ಅವರು ಹೇಳಿದ್ದಾರೆ.
'ಪ್ರವಾಸೋದ್ಯಮ ಚಟುವಟಿಕೆಗಳು, ಅರಣ್ಯದ ಜಾಗ ಒತ್ತುವರಿ ಹಾಗೂ ಅರಣ್ಯದ ಸಮೀಪದಲ್ಲಿ ಆಗುತ್ತಿರುವ ಬೆಳೆ ಬದಲಾವಣೆ ವಿಚಾರಗಳ ಬಗ್ಗೆ ಸಚಿವರು ಮಾತನಾಡುತ್ತಿಲ್ಲ. ಹುಲಿಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾಗುವ ಮುನ್ನ, ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಏಕೆ ಬರುತ್ತಿವೆ ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಬೇಕು' ಎಂದು ಪ್ರಾಣಿ ಸಂರಕ್ಷಣಾ ಮಂಡಳಿಯ ಮಾಜಿ ಸದಸ್ಯ ಜಯಚಂದ್ರನ್ ಅವರು ಆಗ್ರಹಿಸಿದ್ದಾರೆ.