ನವದೆಹಲಿ: ರಾಷ್ಟ್ರಪತಿ ಭವನದ ಪ್ರಸಿದ್ಧ 'ಮೊಘಲ್ ಉದ್ಯಾನ'ವನ್ನು ಇನ್ನು ಮುಂದೆ 'ಅಮೃತ್ ಉದ್ಯಾನ' ಎಂದು ಕರೆಯಲಾಗುವುದು ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.
ಆಕರ್ಷಕ ಉದ್ಯಾನ ವರ್ಷಕ್ಕೊಮ್ಮೆ ಸಾರ್ವಜನಿಕರಿಗೆ ತೆರೆದಿರುತ್ತವೆ.
ಈ ಬಾರಿ ಜನರು ಜ. 31 ರಿಂದ ಭೇಟಿ ನೀಡಬಹುದು. ಮಾರ್ಚ್ 26ರ ವರೆಗೂ ತೆರೆದಿರುತ್ತದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ರಾಷ್ಟ್ರಪತಿ ಭವನದ ಉದ್ಯಾನ ಮತ್ತು ಉದ್ಯಾನ ಉತ್ಸವ 2023 ಉದ್ಘಾಟಿಸಲಿದ್ದಾರೆ.
'ಆಜಾದಿ ಕಾ ಅಮೃತ ಮಹೋತ್ಸವ' ಆಚರಿಸುವ ಸಂದರ್ಭದಲ್ಲಿ ರಾಷ್ಟ್ರಪತಿ ಭವನದ ಉದ್ಯಾನಗಳಿಗೆ 'ಅಮೃತ ಉದ್ಯಾನ' ಎಂದು ಸಾಮಾನ್ಯ ಹೆಸರು ನೀಡಲು ಅವರು ಸಂತೋಷಪಡುತ್ತಾರೆ' ಎಂದು ರಾಷ್ಟ್ರಪತಿ ಅವರ ಪತ್ರಿಕಾ ಉಪ ಕಾರ್ಯದರ್ಶಿ ನಾವಿಕಾ ಗುಪ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಕೇಂದ್ರ ಸರ್ಕಾರ ದೆಹಲಿಯ ರಾಜಪಥವನ್ನು 'ಕರ್ತವ್ಯ ಪಥ' ಎಂದು ಮರುನಾಮಕರಣ ಮಾಡಿತ್ತು.
ವಿಸ್ತಾರವಾದ ರಸ್ತೆಗಳು ಹಾಗೂ ಇತರ ಸಂಸ್ಥೆಗಳು ವಸಾಹತುಶಾಹಿಯ ಗುರುತನ್ನು ಹೊಂದಿರಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅವುಗಳ ಮರುನಾಮಕರಣ ಮಾಡುತ್ತಿದ್ದು, 'ಕರ್ತವ್ಯ ಪಥ' ಅಂತಹ ಪ್ರಯತ್ನಗಳಲ್ಲಿ ಒಂದಾಗಿತ್ತು.
ಡಾ.ಎಪಿಜೆ ಅಬ್ದುಲ್ ಕಲಾಂ ಮತ್ತು ರಾಮನಾಥ ಕೋವಿಂದ ಅವರ ಅಧಿಕಾರಾವಧಿಯಲ್ಲಿ, ಹರ್ಬಲ್ -1, ಹರ್ಬಲ್ -2, ಸ್ಪರ್ಶ ಉದ್ಯಾನ, ಬೋನ್ಸಾಯ್ ಗಾರ್ಡನ್ ಮತ್ತು ಆರೋಗ್ಯ ವನಂ ಎಂಬ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ರಾಷ್ಟ್ರಪತಿ ಭವನ ಶ್ರೀಮಂತ ವೈವಿಧ್ಯಮಯ ಉದ್ಯಾನಗಳಿಗೆ ನೆಲೆಯಾಗಿದೆ. ಈಸ್ಟ್ ಲಾನ್, ಸೆಂಟ್ರಲ್ ಲಾನ್, ಲಾಂಗ್ ಗಾರ್ಡನ್ ಮತ್ತು ಸರ್ಕುಲರ್ ಗಾರ್ಡನ್‌ಗಳ ಮೂಲಕ ಈ ಉದ್ಯಾನ ಜನಾಕರ್ಷಣೆಯಾಗಿದೆ.