ನವದೆಹಲಿ: ಇಲ್ಲಿನ ಕರ್ತವ್ಯಪಥದಲ್ಲಿ ಇದೇ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರದರ್ಶಿಸಲು ಅಸ್ಸಾಂ, ಮಹಾರಾಷ್ಟ್ರ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಪಶ್ಚಿಮಬಂಗಾಳ ಸೇರಿ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಬಾರಿ 'ನಾರಿ ಶಕ್ತಿ' ಪರಿಕಲ್ಪನೆಯಡಿ ಸಜ್ಜುಗೊಳಿಸುತ್ತಿರುವ ವರ್ಣರಂಜಿತ ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಕಳೆಗಟ್ಟಿಸಲಿವೆ.
ದೇಶದ ಸಾಂಸ್ಕೃತಿಕ ಪರಂಪರೆ, ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಬಿಂಬಿಸುವ ಒಟ್ಟು 23 ಸ್ತಬ್ಧಚಿತ್ರಗಳು ಈ ಬಾರಿ ಪಥಸಂಚಲನದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಇದರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 17 ಹಾಗೂ ವಿವಿಧ ಸಚಿವಾಲಯ ಮತ್ತು ಇಲಾಖೆಗಳಿಂದ ಆರು ಸ್ತಬ್ಧಚಿತ್ರಗಳು ಇರಲಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಬಾರಿ ರಾಜ್ಯದಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಬಿಂಬಿಸುವ ಸ್ತಬ್ಥಚಿತ್ರ ಪರೇಡ್‌ನಲ್ಲಿ ಭಾಗವಹಿಸಲಿದೆ.
ನಗರದ ರಾಷ್ಟ್ರೀಯ ರಂಗಸ್ಥಳದ ಕ್ಯಾಂಪ್‌ನಲ್ಲಿ ಕೆಲವು ಸ್ತಬ್ಧಚಿತ್ರಗಳ ನಿರ್ಮಾಣ ನಡೆಯುತ್ತಿದ್ದರೆ, ಮತ್ತೆ ಕೆಲವು ಸ್ತಬ್ಧಚಿತ್ರಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ನಡೆಯುತ್ತಿದೆ. ಇದಲ್ಲದೇ ಪಥಸಂಚಲನದಲ್ಲಿ ಫ್ಲೋಟ್‌ಗಳು ಮತ್ತು ಅತ್ಯಾಧುನಿಕ ಯಂತ್ರೋಪಕರಣ, ವಾಹನಗಳನ್ನು ಡಿಆರ್‌ಡಿಒ, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಪ್ರದರ್ಶಿಸಲಿವೆ ಎಂದು ಅಧಿಕಾರಿಗಳು ಹೇಳಿದರು.
ಈ ಬಾರಿ ಭಾರತೀಯ ರೈಲ್ವೆಯು ಯಾವುದೇ ಸ್ತಬ್ಧಚಿತ್ರವನ್ನು ಪ್ರದರ್ಶಿಸುತ್ತಿಲ್ಲ.