ನವದೆಹಲಿ :ಭೋಪಾಲ್ ಅನಿಲ ದುರಂತದ (Bhopal Gas Tragedy) ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ನಂತರ ಅದನ್ನು ನಡೆಸುತ್ತಿರುವ ಸಂಸ್ಥೆಗಳಿಂದ ಹೆಚ್ಚುವರಿ ರೂ. 7,844 ಕೋಟಿ ಕೋರಿರುವ ಕೇಂದ್ರದ ಅರ್ಜಿಯ ಕುರಿತಂತೆ ಸುಪ್ರೀಂ ಕೋರ್ಟ್ (Supreme Court) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಲಯವು ತನ್ನ ಕಾರ್ಯವ್ಯಾಪ್ತಿಯ ಕುರಿತಂತೆ ಬದ್ಧವಾಗಿದೆ ಹಾಗೂ ಕಂಪೆನಿಯೊಂದಕ್ಕೆ ಒಮ್ಮೆ ಒಂದು ಒಪ್ಪಂದಕ್ಕೆ ಬಂದ ನಂತರ 30 ವರ್ಷಗಳ ನಂತರ ಅದನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
"ಅನುಮತಿ ಸಾಧ್ಯವಿಲ್ಲದ ಒಂದು ವಿಚಾರಕ್ಕೆ ಕೈಹಾಕಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಎರಡೂ ಕಡೆಗಳು ಒಂದು ಒಪ್ಪಂದಕ್ಕೆ ಬಂದಿವೆ ಹಾಗೂ ನ್ಯಾಯಾಲಯ ಅದನ್ನು ಅನುಮೋದಿಸಿದೆ. ಆದರೆ ಈಗ ಅದನ್ನು ಮರುಪರಿಶೀಲಿಸಲು ಅನುಮತಿಸುವುದು ಸರಿಯಾಗದು. ಒಂದು ಪ್ರಕರಣದಲ್ಲಿ ನಮ್ಮ ತೀರ್ಮಾನ ವ್ಯಾಪಕ ಪರಿಣಾಮ ಬೀರಬಹುದು. ಎಂದು ಜಸ್ಟಸ್ ಸಂಜಯ್ ಕಿಶನ್ ಕೌಲ್ ಅವರ ನೇತೃತ್ವದ ಪಂಚ ಸದಸ್ಯರ ಸಂವಿಧಾನಿಕ ಪೀಠ ಹೇಳಿದೆ.
ಕೇಂದ್ರ ತನ್ನ ಕ್ಯುರೇಟಿವ್ ಅರ್ಜಿಯನ್ನು ಡಿಸೆಂಬರ್ 2010 ರಲ್ಲಿ ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಿ ಹೆಚ್ಚಿನ ಪರಿಹಾರ ಕೋರಿತ್ತು.
ಇದಕ್ಕೂ ಮೊದಲು ಜೂನ್ 7, 2010 ರಲ್ಲಿ ಭೋಪಾಲದ ನ್ಯಾಯಾಲಯವು ಯೂನಿಯನ್ ಕಾರ್ಬೈಡ್ ಸಂಸ್ಥೆಯ ಏಳು ಅಧಿಕಾರಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಆಗಿನ ಯುನಿಯನ್ ಕಾರ್ಬೈಡ್ ಅಧ್ಯಕ್ಷ ವಾರೆನ್ ಆಂಡರ್ಸನ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರೂ ಅತ ವಿಚಾರಣೆಗೆ ಹಾಜರಾಗಿರಲಿಲ್ಲ.
ಫೆಬ್ರವರಿ 1, 1992 ರಲ್ಲಿ ಭೋಪಾಲದ ಸಿಜೆಎಂ ನ್ಯಾಯಾಲಯ ಆತನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ಆಂಡರ್ಸನ್ 2014 ರಲ್ಲಿ ಸಾವನ್ನಪ್ಪುವುದಕ್ಕಿಂತ ಮೊದಲು 1992 ಹಾಗೂ 2009 ರಲ್ಲಿ ಆತನ ವಿರುದ್ಧ ಎರಡು ಬಾರಿ ಜಾಮೀನುರಹಿತ ವಾರಂಟ್ ಜಾರಿಯಾಗಿತ್ತು.