ಕೋಲ್ಕತ್ತಾ : ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್ ಅವರು ವಿಶ್ವ ಭಾರತಿ ಕೇಂದ್ರೀಯ ವಿಶ್ವವಿದ್ಯಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿಶ್ವವಿದ್ಯಾಲಯ, ಒತ್ತುವರಿ ತೆರವು ಮಾಡಬೇಕೆಂದು ಸೂಚಿಸಿದೆ.
'5,662.8 ಚದರ ಅಡಿ ಜಾಗವನ್ನು ಅಮರ್ತ್ಯ ಸೆನ್ ಅವರು ಒತ್ತುವರಿ ಮಾಡಿಕೊಂಡು, ತಮ್ಮ ಮನೆ ನಿರ್ಮಿಸಿಕೊಂಡಿದ್ದಾರೆ' ಎಂದು ವಿಶ್ವವಿದ್ಯಾಲಯದ ಉಪ ಕುಲಸಚಿವ ಅವರು ಸಹಿ ಮಾಡಿರುವ ಪತ್ರವು ಹೇಳಿದೆ.
'ಅಮರ್ತ್ಯ ಸೆನ್ ಅವರು ಬಯಸಿದರೆ, ಅವರೇ ಸೂಚಿಸುವ ವಕೀಲರ ಮೂಲಕವೂ ಸರ್ವೇ ಕಾರ್ಯ ಮಾಡಿಸಲು ಸಿದ್ಧರಿದ್ದೇವೆ. ಆದಷ್ಟು ಬೇಗ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವು ಮಾಡಬೇಕು' ಎಂದು ಪತ್ರದಲ್ಲಿ ತಿಳಿಸಲಾಗಿದೆ.
'ಒಂದೂಕಾಲು ಎಕರೆ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕ್ರೀಡಾಂಗಣದ ಜಾಗವನ್ನು ಅಮರ್ತ್ಯ ಸೆನ್ ಅವರ ತಂದೆ 1943ರಲ್ಲಿ ಗುತ್ತಿಗೆ ಪಡೆದುಕೊಂಡಿದ್ದರು' ಎಂದು ವಿಶ್ವವಿದ್ಯಾಲಯದ ವಕ್ತಾರೆ ಮಹುವಾ ಬ್ಯಾನರ್ಜಿ ಹೇಳಿದರು. ಆದರೆ, ಈ ಕುರಿತು ಪ್ರತಿಕ್ರಿಯೆ ಪಡೆದುಕೊಳ್ಳಲು ಅಮರ್ತ್ಯ ಸೇನ್ ಅವರಾಗಲಿ, ಅವರ ಕುಟುಂಬವಾಗಲಿ ಸಂಪರ್ಕಕ್ಕೆ ಸಿಗಲಿಲ್ಲ.
'ಸೆನ್ ಅವರ ಕುಟುಂಬವು ವಿಶ್ವವಿದ್ಯಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ' ಎಂದು ವಿಶ್ವವಿದ್ಯಾಲಯದ ಉಪ ಕುಲಪತಿ ಬಿದ್ಯುಕ್ತ್ ಚಕ್ರವರ್ತಿ ಅವರು 2021ರಲ್ಲಿಯೂ ಆರೋಪಿಸಿದ್ದರು. ಆಗ ಪ್ರತಿಕ್ರಿಯಿಸಿದ್ದ ಸೆನ್ ಅವರು, ಒತ್ತುವರಿ ಆಗಿದೆ ಎಂದು ಆರೋಪಿಸಲಾಗುತ್ತಿರುವ ಜಾಗವನ್ನು ಹಲವು ವರ್ಷಗಳ ವರೆಗೆ ಗುತ್ತಿಗೆ ಪಡೆಯಲಾಗಿದೆ ಎಂದಿದ್ದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹಿಂದೆ ಈ ಕುರಿತು ಪ್ರತಿಕ್ರಿಯಿಸಿ, 'ಸೆನ್ ಅವರು ಬಿಜೆಪಿಯನ್ನು ಹಾಗೂ ಅದರ ಸಿದ್ಧಾಂತವನ್ನು ಟೀಕಿಸುತ್ತಾರೆ. ಈ ಕಾರಣಕ್ಕಾಗಿಯೇ ಅವರನ್ನು ಹಿಂಸಿಸಲಾಗುತ್ತಿದೆ' ಎಂದು ಆರೋಪಿಸಿದ್ದರು.