ಶ್ರೀ ಅಯ್ಯಪ್ಪಸ್ವಾಮಿಯ ಕ್ಷೇತ್ರವಾದ ಶಬರಿಮಲೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ವಿದ್ಯಮಾನಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದು, ಮಕರಜ್ಯೋತಿಯ ದರ್ಶನ ಪಡೆದು ಪಾವನರಾದರು. ಕೇರಳದ ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂಡಿದ ಮಕರಜ್ಯೋತಿಯನ್ನು ಅಯ್ಯಪ್ಪ ಭಕ್ತಾದಿಗಳು ವೀಕ್ಷಿಸಿ, ಧನ್ಯತಾ ಭಾವವನ್ನು ಅನುಭವಿಸಿದರು.
ಪ್ರತಿವರ್ಷ ಮಕರ ಸಂಕ್ರಮಣದ ಸಂದರ್ಭದಲ್ಲಿ ಈ ಮಕರಜ್ಯೋತಿಯ ದರ್ಶನವಾಗುತ್ತಿದ್ದು, ಈ ವರ್ಷ ಇಂದು ಮಕರಜ್ಯೋತಿಯ ದರ್ಶನವಾಗಿದೆ. ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂರು ಬಾರಿ ಮೂಡಿದ ಮಕರಜ್ಯೋತಿಯನ್ನು ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವ ಭಕ್ತಿಪರವಶತೆಯ ಹರ್ಷೋದ್ಗಾರದೊಂದಿಗೆ ಭಕ್ತರು ಕಣ್ತುಂಬಿಕೊಂಡರು.
ಅತ್ಯಂತ ಮಹತ್ವದ ವಿದ್ಯಮಾನವಾದ ಇದರ ದರ್ಶನಕ್ಕೆಂದೇ ಸಹಸ್ರಾರು ಭಕ್ತರು ಶಬರಿಮಲೆಗೆ ಬಂದಿದ್ದು, ಕೆಲವು ಗಂಟೆಗಳಿಂದ ಇದಕ್ಕಾಗಿ ಕಾದಿದ್ದರು. ಕೊನೆಗೂ ಕಾಣಿಸಿದ ಮಕರಜ್ಯೋತಿಯನ್ನು ಕಂಡು, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಳದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿದವು.
ಪಂದಳ ಅರಮನೆಯಿಂದ ಜ. 12ರಂದು ಹೊರಟ ಶ್ರೀಅಯ್ಯಪ್ಪ ಸ್ವಾಮಿಗೆ ತೊಡಿಸಲಿರುವ ಪವಿತ್ರ ಆಭರಣಗಳ ಘೋಷಯಾತ್ರೆ ಶನಿವಾರ ಸಂಜೆ 6.30ಕ್ಕೆ ಪವಿತ್ರ ಹದಿನೆಂಟು ಮೆಟ್ಟಿಲನ್ನೇರಿ ಸನ್ನಿದಾನ ತಲುಪುತ್ತಿದ್ದಂತೆ ದೇವಸ್ಥಾನದ ತಂತ್ರಿವರ್ಯ ಕಂಠರರ್ ರಾಜೀವರ್, ಮುಖ್ಯ ಅರ್ಚಕ ಕೆ. ಜಯರಾಜನ್ ನಂಬೂದಿರಿ ಚಿನ್ನಾಭರಣ ಹೊಂದಿದ ಪೆಟ್ಟಿಗೆಯನ್ನು ಸ್ವೀಕರಿಸಿ ಗರ್ಭಗುಡಿಯೊಳಗೆ ಕೊಂಡೊಯ್ದು ಶ್ರೀ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿದ ನಂತರ ದೀಪಾರಾಧನೆ ನಡೆಸಿದರು. ನಂತರ 6.46ಕ್ಕೆ ಪೊನ್ನಂಬಲ ಬೆಟ್ಟದಲ್ಲಿ ಮೊದಲಬಾರಿಗೆ ಮಕರಜ್ಯೋತಿ ಪ್ರಜ್ವಲಿಸಿದೆ. ನಂತರ ನಿಮಿಷಗಳ ಅಂತರದಲ್ಲಿ ಒಟ್ಟು ಮೂರು ಬಾರಿ ಮಕರಜ್ಯೋತಿ ದರ್ಶನವಾಗಿದೆ.
ಭಾರೀ ಭಕ್ತಜನಸ್ತೋಮ:
ಮಧ್ಯಾಃನದ ನಂತರ ಪಂಪೆಯಿಂದ ಸನ್ನಿದಾನಕ್ಕೆ ಭಕ್ತಾದಿಗಳ ಸಂಚಾರಕ್ಕೆ ನಿಯಂತ್ರಣ ಏರ್ಪಡಿಸಲಾಗಿತ್ತು. ಶಬರಿಮಲೆಯಲ್ಲಿ ಭಕ್ತಾದಿಗಳ ದಟ್ಟಣೆ ಬೆಳಗ್ಗಿಂದಲೇ ಹೆಚ್ಚಾಗುತ್ತಿರುವುದನ್ನು ಮನಗಂಡು ಪೊಲೀಸರು ನೀಲಕ್ಕಲ್‍ನಿಂದ ಮುಂದಕ್ಕೆ ತೆರಳುವುದಕ್ಕೂ ಭಕ್ತಾದಿಗಳಿಗೆ ನಿಯಂತ್ರಣ ಏರ್ಪಡಿಸಿದ್ದರು. ಕಣಮಲ, ನೀಲಕ್ಕಲ್ ಭಾಗದಲ್ಲಿ ಉಂಟಾಗಿರುವ ವಾಹನಗಳ ಟ್ರಾಫಿಕ್ ಜಾಮ್ ಪರಿಗಣಿಸಿ ಈ ನಿಯಂತ್ರಣ ಹೇರಲಾಗಿತ್ತು. ಭಕ್ತಾದಿಗಳಿಗೆ ಮುಂದಕ್ಕೆ ತೆರಳಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ತೆಲಂಗಾಣದಿಂದ ಆಗಮಿಸಿದ್ದ ಭಕ್ತಾದಿಗಳು ಎರುಮೇಲಿ-ರಾನ್ನಿ ರಸ್ತೆಯಲ್ಲಿ ಕುಳಿತು ಶರಣಂ ಘೋಷ ಮೊಳಗಿಸಿ ಪ್ರತಿಭಟನೆ ಸೂಚಿಸಿದರು.
ಮಕರಜ್ಯೋತಿ ದರ್ಶನಕ್ಕಿರುವ ಜಾಗವೆಲ್ಲಾ ಬೆಳಗ್ಗಿಂದಲೇ ಭರ್ತಿಯಾಗಿತ್ತು. ಸನ್ನಿದಾನ ಮತ್ತು ಆಸುಪಾಸು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ದಿವ್ಯ ಮಕರಜ್ಯೋತಿ ದರ್ಶನಕ್ಕಾಗಿ ಬೆಳಗ್ಗಿಂದಲೇ ಕಾದು ನಿಂತಿದ್ದರು. ಸನ್ನಿದಾನದ ಅಸುಪಸಿನ ಬೆಟ್ಟಗಳಲ್ಲಿ ಕಳೆದ ಕೆಲವು ದಿವಸಗಳಿಂದ ವಿಶೇಷ ಕುಟೀರ(ಬಿರಿ)ನಿರ್ಮಿಸಿ ಭಕ್ತಾದಿಗಳು ತಂಗಿದ್ದರು.