ನವದೆಹಲಿ:ರಾಜ್ಯಕ್ಕೆ ನಿರ್ದಿಷ್ಟ ಎಲೆಕ್ಟ್ರಾನಿಕ್ಸ್ ನಿಗಾ ಮಾರ್ಗಸೂಚಿ ರೂಪಿಸಲು ಹಾಗೂ ರಾಜ್ಯಾದ್ಯಂತ ರಸ್ತೆ ಸುರಕ್ಷಾ ನಿಯಮಗಳನ್ನು ಜಾರಿಗೊಳಿಸಲು ಚೌಕಟ್ಟು ರಚನೆಗೆ ಎರಡು ವಾರಗಳ ಒಳಗೆ ಸಭೆ ಆಯೋಜಿಸುವಂತೆ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎ.ಎಂ. ಸಪ್ರೆ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪರ್ದಿಪಾಲ ಅವರನ್ನು ಒಳಗೊಂಡ ಪೀಠ ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 136 ಎ (ಎಲೆಕ್ಟ್ರಾನಿಕ್ಸ್ ಮೇಲ್ವಿಚಾರಣೆ ಹಾಗೂ ರಸ್ತೆ ಸುರಕ್ಷೆ ಜಾರಿ) ಜಾರಿಗೊಳಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂಬುದಕ್ಕೆ ಸಹಮತ ವ್ಯಕ್ತಪಡಿಸಿತು.
ಮೋಟಾರು ವಾಹನ ಕಾಯ್ದೆ ಸೆಕ್ಷನ್ 215 ಬಿ ಸಲಹಾ ಸಾಮರ್ಥ್ಯ ಇರುವ ರಾಷ್ಟ್ರೀಯ ರಸ್ತೆ ಸುರಕ್ಷಾ ಮಂಡಳಿಯನ್ನು ರೂಪಿಸಲು ಅವಕಾಶ ನೀಡುತ್ತದೆ. ಈ ಚೌಕಟ್ಟಿಗೆ ಅನುಗುಣವಾಗಿ ನ್ಯಾಯಾಲಯ ರೂಪಿಸಿದ ಸಮಿತಿಯ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಎ.ಎಂ. ಸಪ್ರೆ, ಸರಕಾರಿ ಅಧಿಕಾರಿಗಳು ಹಾಗೂ ಆಯಮಿಕಸ್ ಕ್ಯೂರಿ ಮಾರ್ಗಸೂಚಿಗಳನ್ನು ರೂಪಿಸಬೇಕಾಗುತ್ತದೆ ಎಂದು ಪೀಠ ಹೇಳಿತು. ಪ್ರಕರಣದ ವಿಚಾರಣೆಯನ್ನು ಪೆಬ್ರವರಿ ಮೊದಲ ವಾರಕ್ಕೆ ಪಟ್ಟಿ ಮಾಡಲಾಗಿದೆ.
ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡಿದರೆ ಆಯಮಿಕಸ್ ಕ್ಯೂರಿ ನ್ಯಾಯಾಲಯಕ್ಕೆ ಮಾಹಿತಿ ನೀಡಬಹುದು ಎಂದು ಪೀಠ ಹೇಳಿದೆ. ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್, ಸರಕಾರ ಈಗಾಗಲೇ ಸೆಕ್ಷನ್ 136 (2)ರ ಅಡಿಯಲ್ಲಿ ನಿಯಮಗಳನ್ನು ರೂಪಿಸಿದೆ ಎಂದರು.