ಕಾಸರಗೋಡು: ನಗರದ ಜನರಲ್ ಆಸ್ಪತ್ರೆಯ ಅಭ್ಯುದಯದ ಶಿಲ್ಪಿ, ಕಾಸರಗೋಡು ಐಎಂಎ ಘಟಕಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿಮುಡಿಸಿದ ಸಂಘಟಕ ಮತ್ತು ಜನಾನುರಾಗಿ ವೈದ್ಯ ಡಾ. ಬಿ. ನಾರಾಯಣ ನಾಯ್ಕ್ ಅವರನ್ನು ಏಳ್ಕಾನದ ಅವರ ತರವಾಡು ಮನೆಯಲ್ಲಿ ಅಭಿನಂದಿಸಲಾಯಿತು.
ಬಾಳೆಗುಳಿ ತರವಾಡು ಮನೆಯಂಗಳದಲ್ಲಿ ಆಪ್ತೇಷ್ಟರ ಸಮ್ಮುಖ ನಡೆದ ಸ್ಮೇಹಕೂಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಎಣ್ಮಕಜೆ ಗ್ರಾ. ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿ ಮಾತನಾಡಿ, ಮರಾಟಿ ಸಮುದಾಯದ ಮೀಸಲಾತಿ ಪುನರ್ ಸ್ಥಾಪನೆ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಗಡಿಪ್ರದೇಶದ ಬಡಜನರ ಪಾಲಿಗೆ ಆಶಾಕಿರಣವಾಗಿದ್ದ ಡಾ. ನಾರಾಯಣ ನಾಯ್ಕ್ ಅವರ ಸಾಮಾಜಿಕ ಕಳಕಳಿ ಪ್ರಶಂಸನೀಯ. ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದಿರುವುದರಿಂದಲೇ ಮನುಜಮುಖಿಯಾಗಿರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರಿ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ಬಿ.ಜಿ. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಕಣಿಪುರ ಮಾಸಪತ್ರಿಕೆ ಸಂಪಾದಕ, ಸಾಂಸ್ಕøತಿಕ ಕಲಾ ಚಿಂತಕ ಎಂ.ನಾ. ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾರದಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಬಾರಿಕ್ಕಾಡು, ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಜನಾರ್ದನ ನಾಯ್ಕ್, ಜಿ.ಪಂ ಮಾಜಿ ಸದಸ್ಯೆ ಪುಷ್ಪಾ ಅಮೆಕ್ಕಳ, ಲೇಖಕ ಅಪ್ಪಣ್ಣ ನಾಯ್ಕ್ ಬಾಳೆಗುಳಿ, ಕುಸುಮಾವತಿ ಟೀಚರ್, ಡಾ. ಶಿವ ನಾಯ್ಕ್, ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.
30 ವರ್ಷಗಳ ಸರ್ಕಾರಿ ಸೇವೆಯಿಂದ ನಿವೃತ್ತರಾದ ಡಾ. ಬಿ.ನಾರಾಯಣ ನಾಯ್ಕ್ ಮತ್ತು ಇವರ ಪತ್ನಿ, ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ಪ್ರಸೂತಿ ತಜ್ಞೆ ಡಾ. ಜ್ಯೋತಿ ಎಸ್. ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಡಾ. ಜ್ಯೋತ್ನಾ ಬಿ.ಎನ್ ಸ್ವಾಗತಿಸಿದರು. ಡಾ. ಶಿವ ನಾಯ್ಕ್ ಮತ್ತು ದಯಾನಂದ ಪಟೇಲ್ ಕಾರ್ಯಕ್ರಮ ನಿರೂಪಿಸಿದರು.
ಸೇವೆಯಿಂದ ವಿರಮಿಸಿದ ಖ್ಯಾತ ವೈದ್ಯ ಡಾ. ನಾರಾಯಣ ನಾಯ್ಕ್ ಅವರಿಗೆ ಏಳ್ಕಾನದಲ್ಲಿ ಅಭಿನಂದನೆ
0
ಜನವರಿ 03, 2023