ನವದೆಹಲಿ: ಟ್ರಕ್ ಚಾಲಕರಿಗಾಗಿ (truck drivers) ನಿರ್ದಿಷ್ಟ ಕಾಲಾವಧಿ ದುಡಿಮೆಯನ್ನು ನಿಗದಿಗೊಳಿಸುವ ಕಾನೂನನ್ನು ಜಾರಿಗೆ ತರಲಾಗುವುದು ಮತ್ತು 2025ರೊಳಗೆ ರಸ್ತೆ ಅಪಘಾತಗಳ ಸಂಖ್ಯೆಯನ್ನು ಶೇ. 50ರಷ್ಟು ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ ಎಂದು economictimes.com ವರದಿ ಮಾಡಿದೆ.
ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ 'ರಸ್ತೆ ಸುರಕ್ಷತಾ ಅಭಿಯಾನ'ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಸ್ತೆ ಸಾರಿಗೆ ಸಚಿವಾಲಯವು ರಸ್ತೆ ಅಫಘಾತಗಳಲ್ಲಿನ ಸಾವು ಹಾಗೂ ಗಾಯಗಳನ್ನು ತಗ್ಗಿಸಲು ಬದ್ಧವಾಗಿದೆ ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ತಾಂತ್ರಿಕತೆ, ಜಾರಿ, ಶಿಕ್ಷಣ ಹಾಗೂ ತುರ್ತು ಸೇವೆಗಳನ್ನು ಒದಗಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಸ್ತೆ ಸಾರಿಗೆ ಸಚಿವಾಲಯವು ಪ್ರತಿಯೊಬ್ಬರಿಗೂ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲು 'ಸ್ವಚ್ಛತಾ ಪಾಕ್ಷಿಕ' ಕಾರ್ಯಕ್ರಮದಡಿ ಜನವರಿ 11ರಿಂದ ಜನವರಿ 17ರವರೆಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸುತ್ತಿದೆ.