ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡಿನ ನೂತನ ಆಡಳಿತ ಸಮಿತಿ ಅಧಿಕಾರ ವಹಿಸಿಕೊಂಡಿದೆ. ಜಿಲ್ಲಾಧಿಕಾರಿಗಳ ಚೇಂಬರ್ ನಲ್ಲಿ ನೂತನ ಸಮಿತಿಯ ಪ್ರಥಮ ಸಭೆ ಹಾಗೂ ಅಧಿಕಾರ ಸ್ವೀಕಾರ ನಡೆಯಿತು. ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಮುಂದಿನ ಒಂದು ವರ್ಷಕ್ಕೆ 19 ಲಕ್ಷ ರೂ.ಗಳ ಬಜೆಟ್‍ಗೆ ಅನುಮೋದನೆ ನೀಡಲಾಯಿತು. ಭವಾನಿಕಾ ಹೆಸರಿನ ನೂತನ ಸಭಾಂಗಣದ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಕ್ಯಾಂಪಸ್ ಒಳಗೆ ಅತಿಥಿ ಗೃಹ ತೆರೆಯಲು ನಿರ್ಧರಿಸಲಾಯಿತು. ಮಾ.23ರಂದು ರಾಷ್ಟ್ರಕವಿ ಗೋವಿಂದ ಪೈ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಹಾಗೂ ಸಮಿತಿಗೆ ಆದಾಯ ತರುವ ನಿಟ್ಟಿನಲ್ಲಿ ಹೊಸ ಚಿಂತನೆ ಹಾಗೂ ಚಟುವಟಿಕೆಗಳೊಂದಿಗೆ ಮುನ್ನಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಮಿತಿಯ ಸದಸ್ಯರಾದ ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲೆವೀನೋ ಮೊಂತೆರೋ, ಎಚ್.ವಾಸುದೇವ, ಕೆ.ಕಮಲಾಕ್ಷನ್, ಯು.ಎಂ.ಅಬ್ದುಲ್ ರೆಹಮಾನ್, ಆಶಾ ದಿಲೀಪ್ ಸುಳ್ಯಮೆ, ವನಿತಾ ಆರ್.ಶೆಟ್ಟಿ, ಡಿ.ಕಮಲಾಕ್ಷ, ಡಿ.ಎನ್.ರಾಧಾಕೃಷ್ಣ, ಕರುಣಾಕರ ಶೆಟ್ಟಿ, ಹಣಕಾಸು ಅಧಿಕಾರಿ ಎಂ.ಶಿವಪ್ರಕಾಶನ್ ನಾಯರ್, ಕೆ. ಸುರೇಶ್, ಅನೂಪ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ ಸಾಲಿಯಾನ್ ಸ್ವಾಗತಿಸಿ, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.