ನಾವು ಜ್ವರ ಅಥವಾ ಇನ್ನಿತರ ಕಾಯಿಲೆ ಅಂತ ವೈದ್ಯರ ಬಳಿ ಹೋದಾಗ ಅವರು ಆ್ಯಂಟಿಬಯೋಟಿಕ್ ಕೊಡ್ತಾರೆ. ಕೊಡುವಾಗ 3 ದಿನ ತೆಗೆದುಕೊಳ್ಳಿ ಅಥವಾ 5 ದಿನ ತೆಗೆದುಕೊಳ್ಳಿ ಎಂದು ಸೂಚಿಸಿರುತ್ತಾರೆ.
ನಾವು ಆ್ಯಂಟಿಬಯೋಟಿಕ್ ತಗೊಂಡು ಬರ್ತೀವಿ, ಆ ಔಷಧ ತೆಗೆದುಕೊಂಡ ಮಾರನೇಯ ದಿನ ನಮ್ಮ ಕಾಯಿಲೆ ವಾಸಿಯಾಗಿರುತ್ತಾರೆ, ಇರಲಿ ಅಂತ ಆ ದಿನ ಕೂಡ ಆ್ಯಂಟಿ ಬಯೋಟಿಕ್ ತೆಗೆದುಕೊಳ್ಳುತ್ತೇವೆ. ನಂತರ ಕಾಯಿಲೆ ಗುಣವಾಯಿತು ಅಂತ ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವುದು ನಿಲ್ಲಿಸಿ ಬಿಡುತ್ತೇವೆ, ಕೋರ್ಸ್ ಕಂಪ್ಲೀಟ್ ಮಾಡಲ್ಲ. ಈ ರೀತಿ ನಮ್ಮಲ್ಲಿ ಬಹುತೇಕರು ಮಾಡುತ್ತೇವೆ ಅಲ್ವಾ?
ಈ ರೀತಿ ಮಾಡುವುದು ಸರಿಯೇ? ಆ್ಯಂಟಿಬಯೋಟಿಕ್ ಕೋರ್ಸ್ ಕಂಪ್ಲೀಟ್ ಮಾಡದಿದ್ದರೆ ಏನಾಗುತ್ತೆ? ಎಂದು ನೋಡೋಣ ಬನ್ನಿ:
ಆ್ಯಂಟಿಬಯೋಟಿಕ್ ಎಂದರೇನು?
ಆ್ಯಂಟಿಬಯೋಟಿಕ್‌ಗಳನ್ನು ಬ್ಯಾಕ್ಟಿರಿಯಾ ಸೋಂಕುಗಳನ್ನು ಕೊಲ್ಲಲು ಅಥವಾ ನಾಶಪಡಿಸಲು
ಬಳಸಲಾಗುವುದು. ಆ್ಯಂಟಿಬಯೋಟಿಕ್ ತೆಗೆದುಕೊಂಡಾಗ ನಮ್ಮ ದೇಹದಲ್ಲಿ ಬ್ಯಾಕ್ಟಿರಿಯಾಗಳು
ಹೆಚ್ಚಾಗುವುದು ತಡೆಗಟ್ಟುತ್ತದೆ. ಕೆಮ್ಮು, ನ್ಯೂಮೋನಿಯಾ, ಸೋಂಕು , ಗಂಟಲು ನೋವು ಈ
ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಆ್ಯಂಟಿಬಯೋಟಿಕ್ ಬಳಸಲಾಗುವುದು.
ಆ್ಯಂಟಿಬಯೋಟಿಕ್‌ಗಳಲ್ಲಿ ಹೆಚ್ಚಾಗಿ ಅಮೋಕ್ಸಿಲಿನ್ (amoxicillin) ಬಳಸಲಾಗುವುದು. ಇದು ಅನೇಕ ಬಗೆಯ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುತ್ತದೆ, ಪೆನ್ಸಿಲಿನ್ ಎಂಬ ಆ್ಯಂಟಿಬಯೋಟಿಕ್‌ಗಳನ್ನು ಕೆಲವು ಬ್ಯಾಕ್ಟಿರಿಯಾಗಳನ್ನು ನಾಶಪಡಿಸಲು ಬಳಸಲಾಗುವುದು.
ಆ್ಯಂಟಿಬಯೋಟಿಕ್ ಕೋರ್ಸ್ ಮುಗಿಸಬೇಕೆಂದು ವೈದ್ಯರು ಹೇಳುವುದೇಕೆ?'
ಆ್ಯಂಟಿಬಯೋಟಿಕ್‌ಗಳನ್ನು ತೆಗೆದುಕೊಳ್ಳುವುದರಿಂದ ಬ್ಯಾಕ್ಟಿರಿಯಾಗಳು ಹೆಚ್ಚಾಗುವುದನ್ನು
ತಡೆಗಟ್ಟಬಹುದು. ಕೋರ್ಸ್ ಪೂರ್ಣ ಮಾಡಿದರೆ ಬ್ಯಾಕ್ಟಿರಿಯಾಗಳನ್ನು ಸಂಪೂರ್ಣ ನಾಶ
ಮಾಡಬಹುದು, ಇಲ್ಲದಿದ್ದರೆ ಬ್ಯಾಕ್ಟಿರಿಯಾಗಳು ಮತ್ತೆ ಹುಟ್ಟಿಕೊಂಡು ಮತ್ತೆ ಕಾಯಿಲೆ
ಬರುವುದು, ಆದ್ದರಿಂದ ಆ್ಯಂಟಿಬಯೋಟಿಕ್ ಕೋರ್ಸ್ ಮುಗಿಸಬೇಕು.
ಬೇರೆಯವರ ಆ್ಯಂಟಿಬಯೋಟಿಕ್ ಬಳಸಬಹುದೇ?
ವೈದ್ಯರು ಬೇರೆಯವರಿಗೆ ಸೂಚಿಸಿದ ಆ್ಯಂಟಿಬಯೋಟಿಕ್ ನಿಮಗೂ ಆ ಕಾಯಿಲೆ ಇದೆ ಎಂದು
ತೆಗೆದುಕೊಳ್ಳಬೇಡಿ, ದೇಹದಿಂದ ದೇಹಕ್ಕೆ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸವಿರುವುದರಿಂದ
ಆ್ಯಂಟಿಬಯೋಟಿಕ್ ವೈದ್ಯರ ಸಲಹೆ ಮೇರೆಗಷ್ಟೇ ತೆಗೆದುಕೊಳ್ಳಬೇಕು.
ಬಳಸಿಟ್ಟ ಆ್ಯಂಟಿಬಯೋಟಿಕ್ ಬಳಸಬೇಡಿ
ಒಂದು ಆ್ಯಂಟಿಬಯೋಟಿಕ್ ಕೋರ್ಸ್ ಪ್ರಾರಂಭ ಮಾಡಿದರೆ ಆ ಬಾಟಲಿನಲ್ಲಿರುವ ಔಷಧ ಆ ಕೋರ್ಸ್
ಮುಗಿಯುವಾಗ ಮುಗಿಯುತ್ತೆ, ಆದರೆ ಸರಿಯಾಗಿ ಕೋರ್ಸ್ ಕಂಪ್ಲೀಟ್ ಮಾಡದಿದ್ದರೆ ಔಷಧ
ಉಳಿದುಕೊಳ್ಳುವುದು, ಆ ಔಷಧವನ್ನು ಮತ್ತೊಮ್ಮೆ ಕಾಯಿಲೆ ಬಿದ್ದಾಗ ತೆಗೆದುಕೊಳ್ಳಲೇಬಾರದು.
ನೀವು ಯಾವುದೇ ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
ಆ್ಯಂಟಿಬಯೋಟಿಕ್ ಈ ವೈರಸ್ ಮೇಲೆ ವರ್ಕ್ ಮಾಡಲ್ಲ
* ಶೀತ, ಕಫ ಹಳದಿ ಅಥವಾ ಹಸಿರು ಬಣ್ಣದಲ್ಲಿದ್ದರೆ
* ಗಂಟಲು ತುಂಬಾ ಕೆರೆತವಿದ್ದರೆ
* ಜ್ವರ
* ಬ್ರಾಂಕೈಟಿಸ್
ಅಲ್ಲದೆ ಈ ಸಾಮಾನ್ಯ ಬ್ಯಾಕ್ಟಿರಿಯಾ ಸೋಂಕುಗಳಿಗೆ ಆ್ಯಂಟಿಬಯೋಟಿಕ್ ಬೇಕಾಗಿಲ್ಲ
* ಸೈನಸ್ ಸೋಂಕಿಗೆ
* ಕಿವಿ ಸೋಂಕಿಗೆ
ಈ ಸಮಸ್ಯೆಗಳಿಗೆ ಆ್ಯಂಟಿಬಯೋಟಿಕ್ ಬೇಕಾಗಿಲ್ಲ, ನಿಮ್ಮ ಡಾಕ್ಟರ್ ನಿಮಗೆ ಬೇರೆ ಔಷಧ
ಸೂಚಿಸಬಹುದು, ನೀವು ನಿಮ್ಮ ಡಾಕ್ಟರ್ ಮೇಲೆ ಆ್ಯಂಟಿಬಯೋಟಿಕ್ ಕೊಡಿ ಅಂತ ಒತ್ತಾಯ
ಹಾಕಬೇಡಿ.
ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವಾಗ ಇವುಗಳನ್ನು ಪಾಲಿಸಲೇಬೇಕು:
* ನಿಮ್ಮ ವೈದ್ಯರು ಸೂಚಿಸಿದಂತೆ ಔಷಧಿ ತೆಗೆದುಕೊಳ್ಳಿ
* ನಿಮ್ಮ ಆ್ಯಂಟಿಬಯೋಟಿಕ್ ಬೇರೆ ಯಾರ ಜೊತೆಯೂ ಶೇರ್ ಮಾಡಬೇಡಿ
* ಅವುಗಳನ್ನು ಮತ್ತೆ ಬಳಸುವ ಅಂತ ತೆಗೆದಿಡಬೇಡಿ, ಕೋರ್ಸ್ ಮುಗಿದ ಮೇಲೆ ಬಳಸುವಂತಿಲ್ಲ
ಈ ಬಗೆಯ ಅಡ್ಡಪರಿಣಾಮಗಳು ಕಂಡು ಬಂದರೆ ನಿಮ್ಮ ವೈದ್ಯರ ಬಳಿ ಮಾತನಾಡಿ
* ಗುಳ್ಳೆಗಳು
* ತಲೆಸುತ್ತು
* ಬೇಧಿ
* ಯೀಸ್ಟ್ ಸೋಂಕು
* ಕೆಲವರಿಗೆ ತುಂಬಾ ಬೇಧಿ ಉಂಟಾಗುವುದು ಈ ರೀತಿಯಾದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು, ಆದ್ದರಿಂದ ಕೂಡಲೇ ತುರ್ತುಚಿಕಿತ್ಸೆ ಪಡೆಯಬೇಕು
ಈ ಬಗೆಯ ಅಲರ್ಜಿ ಸಮಸ್ಯೆ ಕೂಡ ಕಂಡು ಬರಬಹುದು
* ಗುಳ್ಳೆಗಳು ಏಳುವುದು
* ಊತ
* ಕೆಮ್ಮು
* ಉಸಿರಾಟದಲ್ಲಿ ತೊಂದರೆ
* ತುಟಿ ನೀಲಿ ಬಣ್ಣಕ್ಕೆ ತಿರುಗುವುದು
* ತಲೆಸುತ್ತು, ಪ್ರಜ್ಞೆ ಇಲ್ಲದಿರುವುದು
ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವಾಗ ಈ ಅಂಶಗಳು ನೆನಪಿನಲ್ಲಿರಲಿ
* ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವಾಗ ಮದ್ಯ ಸೇವಿಸಬಾರದು
* ಹಾಲಿನ ಉತ್ಪನ್ನಗಳನ್ನು ಬಳಸಬೇಡಿ
* ಔಷಧಿಯನ್ನು ವೈದ್ಯರು ಸೂಚಿಸಿದ ಸಮಯಕ್ಕೆ ತೆಗೆದುಕೊಳ್ಳಬೇಕು.