ನವದೆಹಲಿ :ತಮ್ಮ ಪ್ರಚಾರ ಮತ್ತು ಇತರ ಉದ್ದೇಶಗಳಿಗೆ ತಪ್ಪಾದ ಚಿತ್ರಗಳನ್ನು ಆರಿಸುವ ಮೂಲಕ ರಾಜಕೀಯ ಪಕ್ಷಗಳು ಹಲವಾರು ಬಾರಿ ಮುಜುಗರಕ್ಕೀಡಾದ ಪ್ರಸಂಗಗಳು ನಡೆದಿವೆ. ಈ ಬಾರಿ ಈ ರೀತಿ ಮುಜುಗರಕ್ಕೀಡಾಗುವ ಸರದಿ ಗುಜರಾತ್‌ನ ಬಿಜೆಪಿ ಸರಕಾರದ್ದಾಗಿದೆ.
ಸಾಮಾಜಿಕ ಜಾಲತಾಣಿಗರೊಬ್ಬರು ಇದರ ಬಗ್ಗೆ ಗಮನ ಸೆಳೆದ ನಂತರವಷ್ಟೇ ಈ ವಿಚಾರ ಬೆಳಕಿಗೆ ಬಂದಿದೆ.
ಕೇರಳದ ರಾಜಧಾನಿ ತಿರುವನಂತಪುರಂ ಮೇಯರ್ ಆಗಿರುವ ಆರ್ಯಾ ರಾಜೇಂದ್ರನ್ ಅವರ ಚಿತ್ರವೊಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಜರಾತ್ ಸೀಎಂ ಭೂಪೇಂದ್ರ ಪಟೇಲ್ ಅವರ ಚಿತ್ರಗಳಿರುವ ಬೃಹತ್ ಪೋಸ್ಟರ್‌ಗಳಲ್ಲಿ ಸ್ಥಾನ ಪಡೆದಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಈ ಪೋಸ್ಟರ್‌ನಲ್ಲಿ ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ್ ಬಗ್ಗೆ ವಿವರಿಸಲಾಗಿದೆಯಲ್ಲದೆ ಪಂಚಾಯತ್ ಸದಸ್ಯರಿಗೆ ತರಬೇತಿ ಮೂಲಕ ಅವರ ಸಬಲೀಕರಣಕ್ಕೆ ಸಹಾಯ ಮಾಡುವ ಕುರಿತು ವಿವರಿಸಲಾಗಿದೆ.
ಆದರೆ ಬಿಜೆಪಿ ಸರಕಾರದ ಈ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವ ಆರ್ಯಾ ರಾಜೇಂದ್ರನ್ ಸಿಪಿಐ(ಎಂ) ಪಕ್ಷದಿಂದ ಆಯ್ಕೆಯಾದವರು ಎಂಬುದು ಇಲ್ಲಿ ಗಮನಿಸತಕ್ಕ ಅಂಶವಾಗಿದೆ.
ಪೋಸ್ಟರಿನಲ್ಲಿ ಆರ್ಯಾ ಆವರು ಮುಷ್ಠಿ ಹಿಡಿದ ಕೈಗಳನ್ನು ಮೇಲಕ್ಕೆತ್ತಿರುವುದು ಕಾಣಿಸುತ್ತದೆ. ಪೋಸ್ಟರ್‌ಗಳು ಗುಜರಾತಿ ಭಾಷೆಯಲ್ಲಿವೆ.
ಕೇರಳ ಬಿಜೆಪಿ ಅದಾಗಲೇ ಆರ್ಯಾ ರಾಜೇಂದ್ರನ್ ಅವರನ್ನು ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಟೀಕಿಸುತ್ತಿದೆಯಲ್ಲದೆ ತಿರುವನಂತಪುರಂ ಕಾರ್ಪೊರೇಷನ್‌ಗೆ ನೇಮಕಾತಿ ಕುರಿತ ಒಂದು ವಿಚಾರದಲ್ಲಿ ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿತ್ತು.
ಈ ಪೋಸ್ಟರ್‌ಗಳ ಬಗ್ಗೆ ತಮಗೆ ತಿಳಿದಿಲ್ಲ ಎಂದು ಗುಜರಾತ್ ಬಿಜೆಪಿಯ ಮಾಧ್ಯಮ ಸಂಚಾಲಕ ಯಜ್ಞೇಶ್ ದವೆ ಹೇಳಿದ್ದಾರೆ.