ನವದೆಹಲಿ : ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಪಠ್ಯಕ್ರಮಗಳು ಈಗ ವಿದೇಶಗಳಲ್ಲೂ ಲಭ್ಯವಾಗಲಿದೆ. ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಪಠ್ಯಕ್ರಮ ಲಭ್ಯವಾಗಬೇಕು ಎಂಬ ಹಿನ್ನೆಲೆಯಲ್ಲಿ ಎಐಸಿಟಿಇ ಈ ಕ್ರಮ ಕೈಗೊಂಡಿದೆ.
ಪಠ್ಯಕ್ರಮದ ಉಚಿತ ವಿತರಣೆಗೆ ಅನುವಾಗುವಂತೆ ಸಾರ್ವಜನಿಕ ಹಕ್ಕುಸ್ವಾಮ್ಯವಾದ ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ಅನ್ನು ಎಐಸಿಟಿಇ ಪಡೆದುಕೊಂಡಿದೆ. ಈ ಲೈಸೆನ್ಸ್ ಲೇಖಕನಿಗೆ ತನ್ನ ಕೃತಿಗಳನ್ನು ಮುಕ್ತವಾಗಿ ಬಳಸುವ, ಹಂಚಿಕೆ ಮಾಡುವ, ಅದನ್ನು ಆಧರಿಸಿ ಅಧ್ಯಯನ ಮಾಡುವ ಹಕ್ಕುಗಳನ್ನು ಅನ್ಯರಿಗೆ ನೀಡಲು ಅವಕಾಶ ಕಲ್ಪಿಸಲಿದೆ.
2019ರ ನವೆಂಬರ್ 25ರಂದು ಯುನೆಸ್ಕೊ ಅಂಗೀಕರಿಸಿದ್ದ ಮುಕ್ತ ಶೈಕ್ಷಣಿಕ ಸಂಪನ್ಮೂಲ (ಒಇಆರ್) ನಿರ್ಣಯಕ್ಕೆ ಅನುಗುಣವಾಗಿ ಮಂಡಳಿಯು ಈ ಲೈಸೆನ್ಸ್ ಅನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಎಐಸಿಟಿಇ ಅಧ್ಯಕ್ಷ ಟಿ.ಜಿ.ಸೀತಾರಾಂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸದ್ಯ ಇ-ಕುಂಬ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿರುವ ಎರಡನೇ ವರ್ಷದ ಕೋರ್ಸ್‌ನ ಇಂಗ್ಲಿಷ್ ಮತ್ತು ಇತರೆ ಭಾರತೀಯ ಭಾಷೆಗಳ ಪಠ್ಯಕ್ರಮಗಳಿಗೆ ಅನ್ವಯಿಸಿ ಈ ಲೈಸೆನ್ಸ್ ಅನ್ವಯವಾಗಲಿದೆ. ಭವಿಷ್ಯದಲಿ ಇತರೆ ಪುಸ್ತಕಗಳು ಹಾಗೂ ಮೂರು, ನಾಲ್ಕನೇ ವರ್ಷದ ಪಠ್ಯಗಳಿಗೂ ಅನ್ವಯಿಸಲಾಗುವುದು ಎಂದು ತಿಳಿಸಿದೆ.