ನವದೆಹಲಿ: ಮಹಿಳೆ ದೂರು ಆಧರಿಸಿ ಅತ್ಯಾಚಾರ ಪ್ರಕರಣ ದಾಖಲಿಸಲು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ಸೈಯದ್ ಶಹನವಾಜ್ ಹುಸೇನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.
'ಈ ಬಗ್ಗೆ ನ್ಯಾಯಯುತ ತನಿಖೆ ಆಗಲಿದೆ. ಆರೋಪದಲ್ಲಿ ಹುರುಳಿಲ್ಲ ಎಂದಾದರೆ ದೋಷಮುಕ್ತರಾಗುತ್ತೀರಿ' ಎಂದು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್, ದೀಪಂಕರ್ ದತ್ತಾ ಅವರಿದ್ದ ಪೀಠ ಹೇಳಿತು.
ಹುಸೇನ್ ಪರವಾಗಿ ಹಾಜರಿದ್ದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಸಿದ್ಧಾರ್ಥ ಲೂತ್ರಾ ಅವರು, ಮಹಿಳೆಯು ಪದೇ ಪದೇ ದೂರು ದಾಖಲಿಸುತ್ತಿದ್ದಾರೆ ಎಂದು ಹೇಳಿದರು.
ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಮರ್ಥನೆಗಳಿಲ್ಲ ಎಂದು ಪೀಠ ಹೇಳಿತು. ಹೈಕೋರ್ಟ್ ಕಳೆದ ಆಗಸ್ಟ್ 17ರಂದು ಹುಸೇನ್ ಅರ್ಜಿಯನ್ನು ತಿರಸ್ಕರಿಸಿತ್ತು.